ಖಾಸಗಿ ಅಪಾರ್ಟ್ಮೆಂಟ್ಗಳಿಗೆ ನೀರು ಕೊಡಬೇಡಿ / DODABALLAPUR
ಖಾಸಗಿ ಅಪಾರ್ಟ್ಮೆಂಟ್ಗಳಿಗೆ ನೀರು ಪೂರೈಸದಂತೆ ಒತ್ತಾಯಿಸಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಪಂ ವ್ಯಾಪ್ತಿಯ ಎಳ್ಳುಪುರ ಗೇಟ್ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮುಖಂಡರಾದ ಮಧುಚಂದ್ರ, ಮುರಳಿ, ಚನ್ನೇಗೌಡ, ವಿನೋದ್, ಮುಕುಂದ್, ರಮೇಶ್ ಇತರರು ಇದ್ದರು.
ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಳ್ಳುಪುರದ ನೀರಿನ ಟ್ಯಾಂಕ್ನಿಂದ ಖಾಸಗಿ ಅಪಾರ್ಟ್ಮೆಂಟ್ಗಳಿಗೆ ನೀರು ಸಂಪರ್ಕ ಕಡಿತ ಮಾಡಿ, ಪೈಪ್ಲೈನ್ ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬಾಶೆಟ್ಟಿಹಳ್ಳಿ ಪಪಂಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಪಪಂ ವ್ಯಾಪ್ತಿಯ ಎಳ್ಳುಪುರ ಗೇಟ್ ಬಳಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡ ಮಧುಚಂದ್ರ ಮಾತನಾಡಿ, ಎಳ್ಳುಪುರದಲ್ಲಿ ಈಗಾಗಲೇ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮದಲ್ಲಿ ಬೋರ್ವೆಲ್ ಕೊರೆಸಿದರೆ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ. ಇದರಿಂದ ಗ್ರಾಮದ ಪಕ್ಕದಲ್ಲಿರುವ ಜುಟ್ಟನಹಳ್ಳಿಯಿಂದ ಬೋರ್ವೆಲ್ ಕೊರೆಸಿ ನಮ್ಮ ಗ್ರಾಮಕ್ಕೆ ನೀರಿನ ಸಂಪರ್ಕ ಪಡೆದಿದ್ದೇವೆ. ಇಷ್ಟು ಸಮಸ್ಯೆ ಇದ್ದರೂ ಪಟ್ಟಣ ಪಂಚಾಯಿತಿಯಿಂದ ಖಾಸಗಿ ಅಪಾರ್ಟ್ಮೆಂಟ್ಗೆ ನೀರು ಕೊಟ್ಟರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದರು.
ಈ ಹಿನ್ನೆಲೆಯಲ್ಲಿ ನಮ್ಮ ಮನವಿಯನ್ನು ಮೀರಿ ಅಪಾರ್ಟ್ಮೆಂಟ್ಗಳಿಗೆ ನೀರಿನ ಪೂರೈಕೆ ಮಾಡಿದರೆ ಗ್ರಾಮದ ಗ್ರಾಮಸ್ಥರೆಲ್ಲರೂ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಲಿದ್ದೇವೆ. ನೀರಿನ ಸಮಸ್ಯೆ ಬಗೆಹರಿಸಿ ಗ್ರಾಮದ ಜನರಿಗೆ ಒಳಿತು ಮಾಡಬೇಕು ಎಂದು ಮನವಿ ಮಾಡಿದರು.