ವಿನಾಕಾರಣ ಜನರನ್ನು ಕಚೇರಿಗೆ ಅಲೆಸಬೇಡಿ

ಸಕಲೇಶಪುರದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೌಡ ಮಾತನಾಡಿದರು. ಸಂಸದ ಶ್ರೇಯಸ್‌ಪಟೇಲ್, ತಶಾಸಕ ಸೀಮೆಂಟ್ ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ, ಡಿಎಫ್‌ಒ ಸೌರಭಕುಮಾರ್, ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ಇತರರು ಇದ್ದರು.
ಸಕಲೇಶಪುರದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೌಡ ಮಾತನಾಡಿದರು. ಸಂಸದ ಶ್ರೇಯಸ್‌ಪಟೇಲ್, ತಶಾಸಕ ಸೀಮೆಂಟ್ ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ, ಡಿಎಫ್‌ಒ ಸೌರಭಕುಮಾರ್, ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ಇತರರು ಇದ್ದರು.
Published on
ಸಕಲೇಶಪುರ: ತಾಲೂಕಿನಲ್ಲಿ ಅಧಿಕಾರಿಗಳ ಪ್ರಮಾಣಿಕತೆ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳಿಂದ ಬಡವರಿಗೆ ಸಾಕಷ್ಟು ಅನ್ಯಾಯವಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಶನಿವಾರ ಕಂದಾಯ ಇಲಾಖೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿ, ಬೇರೆಡೆ ಸಹ ಇಂತಹ ಸಭೆಗಳನ್ನು ನಡೆಸಿದ್ದೇನೆ. ಆದರೆ ಸಕಲೇಶಪುರ ತಾಲೂಕಿನ ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಚಾರದ ಆರೋಪ ಬೇರೆ ಯಾವ ತಾಲೂಕಿನಲ್ಲೂ ಕೇಳಿ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
ಅಧಿಕಾರಿಗಳು ತಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ವಿನಾ ಕಾರಣ ಸಾರ್ವಜನಿಕರನ್ನು ಅಲೆಸುವುದು ತಪ್ಪು. ಕಾನೂನಿನೊಂದಿಗೆ ಮಾನವೀಯತೆ ಬೆಳೆಸಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ದುಡ್ಡು ಪಡೆದು ಬಡವರಿಗೆ ಅನ್ಯಾಯ ಮಾಡಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.

ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ 94ಸಿ ಅಡಿ ಹಕ್ಕುಪತ್ರ ನೀಡಲು ಡೀಮ್ಡ್ ನೇಪ ಹೇಳುವ ಮೂಲಕ ತೊಂದರೆ ನೀಡುತ್ತಿರುವುದು ತಪ್ಪು. ಆದ್ದರಿಂದ ಡೀಮ್ಡ್ ರದ್ದುಪಡಿಸಲು ಸರ್ಕಾರ ತುರ್ತು ತಿರ್ಮಾನ ಕೈಗೊಳ್ಳಲಿದೆ. ಇದರ ನಂತರ 94 ಸಿ ಅರ್ಜಿಗಳು ವೇಗವಾಗಿ ವಿಲೇವರಿಯಾಗಲಿವೆ ಎಂದು ಸಚಿವರು ಭರವಸೆ ನೀಡಿದರು.

ಹಿಂದಿನ ಜನಸಂಪರ್ಕ ಸಭೆಯಂತೆ ಪ್ರಜಾಸೇವಾ ಆಂದೋಲನವು ಬರೀ ಸಭೆಯಲ್ಲ. ಇದಕ್ಕಾಗಿ ಒಂದು ಪ್ರತ್ಯೇಕ ಇಲಾಖೆಯೇ ಇದ್ದು ಪ್ರತಿ ಅರ್ಜಿಯನ್ನು ಸಮಸ್ಯೆ ಬಗೆಹರಿಸುವವರಗೂ ಗಮನಿಸಲಾಗುವುದು. ಆಂದೋಲನದ ವೇಳೆ ಅಧಿಕಾರಿಗಳು ನೀಡಿದ ಹೇಳಿಕೆಗೆ ಬದ್ಧರಾಗದಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಂದೋಲದಲ್ಲಿ 220 ಅರ್ಜಿಗಳು ಬಂದಿದ್ದು ಮದ್ಯಾಹ್ನ ಕಳೆದರು 30 ಅರ್ಜಿಗಳು ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಕಂದಾಯ, ಸರ್ವೇ ಕಚೇರಿಯ ಅರ್ಜಿಗಳನ್ನು ವಿಂಗಡಿಸಿ ಒಂದೆ ಬಗೆಯ ಅರ್ಜಿಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಬಳಿಕ ನಾನು ಮತ್ತೊಮ್ಮೆ ತಾಲೂಕಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದೇನೆ ಎಂದರು.

ಆತ್ಮಸಾಕ್ಷಿಗಾದರೂ ಹೆದರಿ:
ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸವಾಗುವುದಿಲ್ಲ. ಕಳೆದ 10 ವರ್ಷದಿಂದ ಕಂದಾಯ ಇಲಾಖೆ ಮೆಟ್ಟಿಲುಹತ್ತಿ ನನಗೆ ಮಂಡಿ ನಾವು ಬಂದಿದೆ ಆದರೂ ಕೆಲಸವಾಗಿಲ್ಲ ಎಂದು ನಡಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ದೂರಿದರೆ, ತಹಸೀಲ್ದಾರ್ ಉಡಾಫೆಯಿಂದ ವರ್ತಿಸುತ್ತಾರೆ. ಕಚೇರಿಗೆ ಹೋದರೆ ಕುರ್ಚಿ ಸಹ ಕೊಡುವುದಿಲ್ಲ ಎಂದು ಅದಿದ್ರಾವಿಡ ಸಂಘದ ಅಧ್ಯಕ್ಷ ಶಂಕರ್ ದೂರಿದರು.

94 ಸಿ ಸೇರಿದಂತೆ ಯಾವುದೇ ಕೆಲಸಕ್ಕೂ ಹೋದರು ತಹಸೀಲ್ದಾರ್ ಕೆಲಸ ಮಾಡುವುದಿಲ್ಲ ಎಂಬ ವ್ಯಾಪಕ ದೂರು ಬಂದ ಹಿನ್ನಲೆಯಲ್ಲಿ ಸಿಟ್ಟಾದ ಸಚಿವರು, ತಹಸೀಲ್ದಾರ್ ಸುಪ್ರೀತಾ ಅವರನ್ನು ಉದ್ದೇಶಿಸಿ ಏನ್ ಕೆಲಸ ಮಾಡುತ್ತಿರಿ?, ತಹಸೀಲ್ದಾರ್ ಅವರೇ ಆತ್ಮಸಾಕ್ಷಿಗಾದರು ಹೆದರಿ ಕೆಲಸ ಮಾಡಿ. ಏನ್ರೀ ಸಮಸ್ಯೆ? ಎಲ್ಲರೂ ನಿಮ್ಮ ಮೇಲೆ ದೂರು ನೀಡುತ್ತಿದ್ದಾರೆ. ಆಯಕಟ್ಟಿನಲ್ಲಿರುವ ನೀವು ಚುರುಕಿನಿಂದ ಕೆಲಸ ಮಾಡಬೇಕು ಎಂದರು.

ಇಲ್ಲಿಗ್ಯಾಕೆ ಬಂದ್ರಿ? :
ಕುಣಿಗಲ್ ಗ್ರಾಮದಲ್ಲಿರುವ ನಮ್ಮ ಜಮೀನನ್ನು ದುರಸ್ಥಿಪಡಿಸುವಂತೆ ಅರ್ಜಿ ಸಲ್ಲಿಸಿದರೆ ನಿಮ್ಮ ಜಮೀನಿನ ಕಡತವೇ ಇಲ್ಲ ಎಂದು ಸರ್ವೇ ಇಲಾಖೆಯಲ್ಲಿ ಹೇಳುತ್ತಾರೆ ಎಂದು ಕುಣಿಗಲ್ ಗ್ರಾಮದ ಪ್ರಸನ್ನ ದೂರಿದರು. ಇದರಿಂದ ಸಿಟ್ಟಾದ ಸಚಿವರು, ಎಡಿಎಲ್‌ಆರ್ ಅವರನ್ನು ಉದ್ದೇಶಿಸಿ ಇದುವರೆಗೆ ಎಲ್ರೀ ಕೆಲಸ ಮಾಡುತ್ತಿದ್ರೀ?, ಚಿಕ್ಕಬಳ್ಳಾಪುರದಿಂದ ಇಲ್ಲಿಗ್ಯಾಕೆ ಬಂದ್ರಿ? ಇಲ್ಲಿ ಎಲ್ಲರೂ ರೈತರು. ದುಡ್ಡಾಗುವುದಿಲ್ಲ, ಬೆಂಗಳೂರು ಸುತ್ತಮುತ್ತ ಕೆಲಸ ಮಾಡುವುದಲ್ಲವೇ ಎಂದು ಅಧಿಕಾರಿಗೆ ಮಾತಿನಲ್ಲೇ ತಿವಿದ ಸಚಿವರು, ಇನ್ನು ಹದಿನೈದು ದಿನಗಳೊಳಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಡಿಎಲ್‌ಆರ್ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಡಿಡಿಎಲ್‌ಆರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಹಾಸನದಲ್ಲೂ ಹೀಗೆ ಆಗಿದೆ, ಇಲ್ಲೂ ಹೀಗೆ ಆಗಿದೆ. ಭೂ ದುರಸ್ಥಿ ಸಂಬಂಧ ಆದಾಲತ್ ನಡೆಸಿ ದುರಸ್ಥಿ ಕಾರ್ಯ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

ತಾಲೂಕು ಸರ್ವೇ ಇಲಾಖೆ ಭ್ರಷ್ಟಚಾರದ ಕೂಪವಾಗಿದ್ದು, ಕೀರಿಯಲ್ಲಿ ಹಣವಿದ್ದವರಿಗೆ ನ್ಯಾಯ. ಇಲ್ಲಿ ಬಡವರ ಭೂಮಿಯನ್ನು ಶ್ರೀಮಂತರಿಗೆ ಹಂಚಲಾಗುತ್ತಿದೆ. ಆದ್ದರಿಂದ ಸರ್ವೇ ಕಚೇರಿಯಲ್ಲಿರುವ ಎಲ್ಲ ಸರ್ವೇಯರ್‌ಗಳನ್ನು ವರ್ಗಯಿಸಿ ಎಂದು ಸಾರ್ವಜನಿಕರು ಸಭೆಯಲ್ಲಿ ಆಗ್ರಹಿಸಿದರು.ಈ ವೇಳೆ ಮಾತನಾಡಿದ ಸಚಿವರು, ಸರ್ವೇಕಚೇರಿಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇನ್ನೊಂದು ತಿಂಗಳ ಒಳಗಾಗಿ ನಾನೇ ಮತ್ತೆ ತಾಲೂಕಿಗೆ ಆಗಮಿಸಲಿದ್ದೇನೆ ಎಂದರು.
ನಾಳೆ ಭೂಮಿ ಪೂಜೆ ಮಾಡಿಸಿ: ಹೊಸಕೊಪ್ಪಲು ಗ್ರಾಮದಲ್ಲಿ ಹಳೇ ಮನೆ ಬಿದ್ದಿರುವುದರಿಂದ ಗುಡಿಸಿಲಿಲ್ಲ ವಾಸಿಸುತ್ತಿದ್ದೇವೆ. ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮದ ಅಂಗವಿಕಲರೊಬ್ಬರು ದೂರಿದರು.

ಇದಕ್ಕೆ ತಾಪಂ ಇಒ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು. ನಾಚೀಕೆಯಾಗಬೇಕು ನಿಮಗೆ. ಮನುಷ್ಯತ್ವದಿಂದ ಕೆಲಸ ಮಾಡಿ. ಅಂಗವಿಕಲನನ್ನು ಅಲೆಸುವುದು ತಪ್ಪು. ನಾಳೆಯೇ ಮನೆ ನಿರ್ಮಾಣಕ್ಕೆ ನಿವೇ ಪೂಜೆ ಮಾಡಿ ವರದಿ ನೀಡಬೇಕು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net