ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ ಪಡೆಯದೆ ಕೊಳವೆಬಾವಿ ಕೊರೆಸಬೇಡಿ: ಈಶ್ವರ ಖಂಡ್ರೆ

ESHWAR KANDRE
ESHWAR KANDRE
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 1,000 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ.
  • ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ಒತ್ತು
ಬೆಂಗಳೂರು:
ರಾಜ್ಯದ ಹಲವು ಪ್ರದೇಶಗಳಲ್ಲಿ ಅಂತರ್ಜಲಮಟ್ಟ 1,000 ಅಡಿಗೂ ಕೆಳಗೆ ಕುಸಿದಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಕೊಳವೆಬಾವಿ ಕೊರೆಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಲಜೀವನ್ ಮಿಷನ್ ಅಭಿಯಾನದ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 1,000 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ. ನೀರು ಸಿಕ್ಕರೂ ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಹಲವು ಕೊಳವೆಬಾವಿಗಳು ನಿಷ್ಕ್ರಿಯವಾಗುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಮೇಲ್ಮೈ ನೀರಿನ ಮೂಲಗಳ ಮೂಲಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ ಪಡೆದು ಕೊಳವೆಬಾವಿ ಕೊರೆಸಬೇಕು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕೊರೆಸಲಾಗಿರುವ ಸಕ್ರಿಯ ಹಾಗೂ ಬತ್ತಿಹೋದ ಕೊಳವೆಬಾವಿಗಳ ಮರುಪೂರಣಕ್ಕೆ ವಿಬಿಜಿ ರಾಮ್‌ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಭವಿಷ್ಯದಲ್ಲಿ ಕೊಳವೆಬಾವಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದರು.
747 ಗ್ರಾಮಗಳಲ್ಲಿ ಸಮಸ್ಯೆ:
ಮಳೆ ಕೊರತೆಯಿಂದ ಜುಲೈ ತಿಂಗಳಲ್ಲಿ ರಾಜ್ಯದ 766 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಪ್ರಸಕ್ತ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ 747 ಗ್ರಾಮ ಪಂಚಾಯಿತಿಗಳಿಗೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ರಾಜ್ಯದ 138 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.
ಯಾವುದೇ ಗ್ರಾಮದಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ಬಂದರೆ 24 ಗಂಟೆಯೊಳಗೆ ಸಮಸ್ಯೆ ಪರಿಹರಿಸಬೇಕು. ಸಾಧ್ಯವಾಗದಿದ್ದರೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತೆ ಫೌಜಿಯಾ ತರನ್ನುಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*ಮಳೆ ಕೊರತೆಯಿಂದ ಜುಲೈ ತಿಂಗಳಲ್ಲಿ ರಾಜ್ಯದ 766 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಪ್ರಸಕ್ತ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ 747 ಗ್ರಾಮ ಪಂಚಾಯಿತಿಗಳಿಗೆ ಇಳಿಕೆಯಾಗಿದೆ .

-ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net