“ಪ್ರಸ್ತುತ ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿ.ಎಸ್.ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ. ಸಿಗಾಪುರ, ಆಂಸ್ಟ್ರಡಾಮ್, ಡಲ್ಲಾಸ್, ಲಂಡನ್ ಹಾಗೂ ದುಬೈ ಸೇರಿದಂತೆ ಅನೇಕ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಕಚೇರಿ, ಮನರಂಜನೆ ಸೇರಿದಂತೆ ವಿವಿದೋದ್ದೇಶಕ್ಕೆ ಬಳಸಲಾಗುತ್ತಿದೆ. ಈ ನಗರಗಳಲ್ಲಿ ವಿಮಾನ ನಿಲ್ದಾಣಗಳು ಕೇವಲ ಸಂಚಾರ ಉದ್ದೇಶಕ್ಕೆ ಮಾತ್ರವಲ್ಲದೇ ಉದ್ಯೋಗದ ಕೇಂದ್ರವಾಗಿ ನಗರ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಹೀಗಾಗಿ ಜಿ.ಎಸ್.ಆರ್ 751 (ಇ) ನಿಯಮವನ್ನು ಸಡಿಲಗೊಳಿಸಬೇಕು. 150 ಮೀ. ಎತ್ತರದ ಮಿತಿಯನ್ನು 20 ಕಿ.ಮೀ ಬದಲಿಗೆ 15 ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಬೇಕು” ಎಂದು ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳು ಕೇಂದ್ರ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.