ಇಂದು ಸರಿಯಾದ ಜೀವನ ಶೈಲಿಯ ಕೊರತೆಯಿಂದ ಹೆಚ್ಚಿನ ಜನರಿಗೆ ಮೂತ್ರಕೋಶದ(ಕಿಡ್ನಿ) ತೊಂದರೆ ಕಂಡು ಬರುತ್ತಿದೆ, ಇಂತಹ ರೋಗಿಗಳಿಗೆ ಡಯಾಲಿಸಿಸ್ ಕೇಂದ್ರ ಸಹಕಾರಿಯಾಗಲಿದೆ ಎಂದು ರೋಟರಿ ಕ್ಲಬ್ ಆಪ್ ವೇಣುಗ್ರಾಮ ನಿರ್ದೇಶಕ ಅರುಣ ಭಂಡಾರಿ ಹೇಳಿದರು.
ನಗರದ ದಿಯಾ ಆಸ್ಪತ್ರೆಯಲ್ಲಿ ಈಚೆಗೆ ರೋಟರಿ ಕ್ಲಬ್ ಆಪ್ ವೇಣುಗ್ರಾಮದಲ್ಲಿ ಪ್ರಾರಂಭವಾದ ಡಯಾಲಿಸಿಸ್ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಭಾಗದಲ್ಲಿ ದಿಯಾ ಆಸ್ಪತ್ರೆ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿದೆ. ಇದರೊಂದಿಗೆ ಡಯಾಲಿಸಿಸ್ ಕೇಂದ್ರದ ಸೇವೆಯು ಜನರಿಗೆ ದೊರೆಯಲಿದೆ, ಡಯಾಲಿಸಿಸ್ ಚಿಕಿತ್ಸೆಯು ದೂರದ ಊರಿಗೆ ಹೋಗುವುದು ತಪ್ಪಿಸಲಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜೀವ ಪಾಟೀಲ ಮಾತನಾಡಿ ಸುಸಜ್ಜಿತ ವೈದ್ಯಕೀಯ ಸಲಕರಣೆಗಳ ಗುಣಮಟ್ಟದ ಸೇವೆ ನೀಡುವುದರ ಜತೆಗೆ, ಡಯಾಲಿಸಿಸ್ ಕೇಂದ್ರದ ಸೌಲಭ್ಯವು ಈ ಭಾಗದ ಜನರಿಗೆ ಸಿಗಲಿದೆ. ಕಡಿಮೆ ದರದಲ್ಲಿ ಡಯಾಲಿಸಿಸ್ ಸೇವೆ ನೀಡುವ ಮೂಲಕ ಬಡ ಜನರ ಸೇವೆಗೆ ನಮ್ಮ ಧ್ಯೇಯವಾಗಿದೆ ಎಂದು ಡಯಾಲಿಸಿಸ್ ಸೇವೆಯ ಮಹತ್ವವನ್ನು ವಿವರಿಸಿದರು.
ಡಾ.ಅರ್ಚನಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಕಿಡ್ನಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೂತ್ರಕೋಶದ ಸಮಸ್ಯೆ ಇರುವ ರೋಗಿಗಳಿಗೆ ಚಿಕಿತ್ಸೆಗೆ ಡಯಾಲಿಸಿಸ್ ಅವಶ್ಯಕವಾಗಿದೆ. ಆದ್ದರಿಂದ ದಿಯಾ ಆಸ್ಪತ್ರೆಯಲ್ಲಿ ಆರಂಭಿಸಿರುವ ಡಯಾಲಿಸಿಸ್ ಕೇಂದ್ರದ ಸೇವೆ ನೀಡುವ ಮಹತ್ತರ ಜವಾಬ್ದಾರಿ ಆಸ್ಪತ್ರೆ ಮೇಲಿದೆ ಎಂದು ಹೇಳಿದರು.
ರೋಟರಿ ಕ್ಲಬ್ ವೇಣುಗ್ರಾಮದ ಅಧ್ಯಕ್ಷ ಶಶಿಧರ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ ಮುರಗುಡೆ, ಶಶಿಕಾಂತ ನಾಯಿಕ, ವಿನಯಕುಮಾರ ಬಾಳಿಕಾಯಿ,ಮಹೇಶ ಅನಗೋಳ್ಕರ್,ಅರವಿಂದ ಕಡಬಡಿ ಇತರರಿದ್ದರು.