ತೇರದಾಳ: ನೆತ್ತಿ ಸುಡುವ ಬಿಸಿಲುರಿಯ ನಡುವೆ ನಗರ-ಗ್ರಾಮೀಣ ಭಾಗದ ತೋಟ ಮತ್ತು ಗುಡ್ಡಗಾಡು ಪ್ರದೇಶದ ಮನೆಗಳಿಗೆ ಅಲೆದಾಡಿ ಗಣತಿ ಮಾಡುವ ಕಾರ್ಯ ಭರ್ಜರಿಯಾಗಿ ನಡೆದಿದೆ. ಬಹುತೇಕ ಗಣತಿದಾರರು ಅಂತಿಮ ಹಂತಕ್ಕೆ ಬಂದಿದ್ದಾರೆ. ಇನ್ನೇನು ಎಲ್ಲವು ಮುಗಿಯುವ ಸಂದರ್ಭದಲ್ಲಿ ಕಿಟ್ ವಿತರಣೆ ಮಾಡಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.
‘ಮಳೆ ಹೋದ ಮೇಲೆ ಕೊಡೆ ಹಿಡಿದರು’ ಎಂಬಂತೆ ಇಲಾಖೆಯು ಕಿಟ್ ಗಳನ್ನು ಶುಕ್ರವಾರ ವಿತರಣೆ ಮಾಡಿರುವುದು ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.
ಕಿಟ್‌ನಲ್ಲಿ ಬಿಸಿಲಿಗಾಗಿ ಆಸರೆ ಪಡೆಯುವ ಟೋಪಿ, ಬರವಣಿಗೆಗಾಗಿ ಪ್ಯಾಡ್, ಪೆನ್ಸಿಲ್, ರಬ್ಬರ್, ಮಾರ್ಕರ್, ಟೈ, ಕ್ಲಿಪ್ ಇರುವಂತಹ ಬ್ಯಾಗ್‌ಗಳನ್ನು ವಿತರಿಸಲಾಗಿದೆ.
ರಾಷ್ಟ್ರಮಟ್ಟದ ಭಾರತ ಜನಗಣತಿ 2027ರ ಅಂಗವಾಗಿ ಮನೆಪಟ್ಟಿ ತಯಾರಿಸುವ ಕಾರ್ಯ ಗಣತಿದಾರರು ಏ. 16ರಿಂದ ಮೆ. 15ರವರೆಗೆ ಮಾಡುವಂತೆ ಇಲಾಖೆಯು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ತೇರದಾಳ ತಾಲೂಕಿನ ಜನಗಣತಿ ಗ್ರಾಮೀಣಕ್ಕೆ ತಹಸೀಲ್ದಾರ ವಿಜಯಕುಮಾರ ಕಡಕೋಳ ಮತ್ತು ನಗರ ಪ್ರದೇಶದ ಇನ್‌ಚಾರ್ಜ್ ಆಗಿ ಬಿ. ಗಿಡ್ಡಿ ಕಾರ್ಯನಿರ್ವಹಿಸುತ್ತಿದ್ದು, ಗಣತಿ ಕಾರ್ಯವು ಅಂದಾಜು ಶೇ. 90ರಷ್ಟು ಪೂರ್ಣಗೊಂಡಿದೆ. ಜನ ಗಣತಿ ಆಯೋಗವು ನೀಡಿದ ಕಿಟ್ ಈಗ ವಿತರಣೆ ಮಾಡಲು ಮುಂದಾಗಿರುವುದು
ದುರಂತ ಸಂಗತಿ.
ತಡವಾಗಿ ಕಿಟ್ ವಿತರಣೆ: ತೇರದಾಳ ತಾಲೂಕು ಗ್ರಾಮೀಣ ಭಾಗದ ಗಣತಿದಾರರಿಗೆ ತಹಸೀಲ್ದಾರ ವಿಜಯಕುಮಾರ ಕಡಕೋಳ ಮೇಲ್ವಿಚಾರಕ ಮೂಲಕ ವಿತರಿಸಿದ್ದಾರೆ. ಆದರೆ ನಗರ ಭಾಗಗಳಲ್ಲಿ ಕಿಟ್‌ಗಳ ವಿತರಣೆಯಾಗಿರುವುದಿಲ್ಲ. ಹೀಗಾಗಿ ಜಿಲ್ಲೆ ಎಲ್ಲೆಡೆ ಗಣತಿದಾರರ ಕಿಟ್‌ಗಳನ್ನು ಕೊನೆ ಹಂತಕ್ಕೆ ವಿತರಣೆ ಮಾಡಿದ್ದು, ಯಾರಿಗೆ ಉಪಯೋಗ? ಎಂಬ ಚರ್ಚೆ ಜೋರಾಗಿದೆ. ಇಲಾಖೆಗಳ ಇಂತಹ ಎಡವಟ್ಟಿನ ಕಾರ್ಯದಿಂದಾಗಿ ಕ್ಷೇತ್ರಮಟ್ಟದಲ್ಲಿ ಕಾರ್ಯಮಾಡುವ ಗಣತಿದಾರರು ಹೈರಾಣ ಆಗಿರುವುದಂತು ಸತ್ಯ.
ಗಣತಿದಾರರ ಅಳಲು:ತಲೆ ಸುಡುವ ಬಿಸಿಲಲ್ಲಿ ಕಳೆದ ಹದಿನೈದು ದಿನಗಳಿಂದ ಗಣತಿ ಕಾರ್ಯ ಮಾಡುತ್ತಿದ್ದೇವೆ. ಕೈಯಿಂದ ಹಣ ವ್ಯಯಮಾಡಿ ವಸ್ತುಗಳನ್ನು ಖರೀದಿ ಮಾಡಿದ್ದೇವೆ. ಈಗ ಎಲ್ಲವು ಪೂರ್ಣಗೊಳ್ಳುತ್ತಾ ಬಂದಿದೆ. ಕಿಟ್ ವಿತರಣೆ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಗಣತಿದಾರರು ‘ವಿಜಯವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.
"
ಗಣತಿ ಕಾರ್ಯ ನಡೆಯುತ್ತಿದ್ದು, ತೇರದಾಳ ತಾಲೂಕಿನ ಗ್ರಾಮೀಣ ಭಾಗದ ಗಣತಿ ಕಾರ್ಯವು ಶೇ. 90ರಷ್ಟು ಪೂರ್ಣಗೊಂಡಿದೆ. ಕಿಟ್‌ಗಳನ್ನು ಡಿಸಿ ಕಚೇರಿಯಿಂದ ಗುರುವಾರ ಸಂಜೆ ನಮಗೆ ಕೊಟ್ಟಿದ್ದು, ಶುಕ್ರವಾರ ವಿತರಿಸಲಾಯಿತು.
ವಿಜಯಕುಮಾರ ಕಡಕೋಳ ತೇರದಾಳ ತಹಸೀಲ್ದಾರ.
"
ನಗರ ಭಾಗಗಳಲ್ಲಿ ಗಣತಿ ಕಾರ್ಯವು ಬಹುತೇಕ ಕೊನೆಯ ಹಂತದಲ್ಲಿದೆ. ಶುಕ್ರವಾರ ಕಚೇರಿ ರಜೆ ಇರುವುದರಿಂದ ಕಿಟ್‌ಗಳನ್ನು ಡಿಸಿ ಕಚೇರಿಯಿಂದ ಶನಿವಾರ ತಂದು ವಿತರಿಸಲಾಗುತ್ತದೆ.