ಕಲಬುರಗಿ-ಬೀದರ‌ ಜಿಲ್ಲೆಯ 7,200 ಕೋಟಿ ರೂ.‌ ಮೊತ್ತದ ಬಹು ಗ್ರಾಮ ಕುಡಿಯುವ ನೀರು ಯೋಜನೆ ಕೇಂದ್ರಕ್ಕೆ ಕಳುಹಿಸಲು ದಿಶಾ ಸಭೆ ಒಪ್ಪಿಗೆ

Photo
Photo
Published on
ಕಲಬುರಗಿ: ಕಲಬುರಗಿ ಮತ್ತು ಬೀದರ ಜಿಲ್ಲೆಯ ಗ್ರಾಮಗಳಿಗೆ ನಾರಾಯಣಪುರ ಡ್ಯಾಂನಿಂದ ನೀರು ತಂದು ಬಹುಗ್ರಾಮ ಯೋಜನೆಯಡಿ ಜಿಲ್ಲೆಯ ಜನವಸತಿ ಪ್ರದೇಶದಗಳಿಗೆ ಕುಡಿಯುವ ನೀರು ಪೂರೈಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 50-50 ಅನುದಾನದಡಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ಇಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ (ದಿಶಾ) ಸಭೆ ಒಪ್ಪಿಗೆ ಸೂಚಿಸಿದೆ.
ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ (ದಿಶಾ) ಸಭೆಯಲ್ಲಿ ಯೋಜನೆ ಅನುಷ್ಠಾನ ಮತ್ತು ಆರಂಭಿಕ 5 ವರ್ಷದ ನಿರ್ವಹಣೆಗೆ ಒಟ್ಟಾರೆ 7,200 ಕೋಟಿ ರೂ. ಅವಶ್ಯಕತೆ ಇದ್ದು, ಕೇಂದ್ರ ತನ್ನ‌ಪಾಲಿನ ಹಣ ನೀಡಲು ಇಂದಿನ ಸಭೆಯಲ್ಲಿ ಕುಲಂಕುಷವಾಗಿ ಚರ್ಚಿಸಲಾಗಿ ಈಗಾಗಲೆ ಬೀದರ ದಿಶಾ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದರಿಂದ ಇಲ್ಲಿಯೂ ಅನುಮೋದನೆ ನೀಡಲಾಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಯೋಜನೆಯ ಕಾರ್ಯನಿರ್ವಾಹಕ ಅಭಿಯಂತ ಜಗದೇವ ಜೀವಣಗಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತವಿರುವ 11 ಎಂ.ವಿ.ಎಸ್. ಯೋಜನೆಗಳಿದ್ದಾಗಿಯೂ ಬೇಸಿಗೆ ನೀರಿಗೆ ಹಾಹಾಕಾರ ಇದೆ. ಜಿಲ್ಲೆಯಲ್ಲಿ ಪಂಚ ನದಿಗಳಿದ್ದರು ನೀರಿನ ಅಭಾವ ತುಂಬಾ ಹೆಚ್ಚಿದೆ. ಜಿಲ್ಲೆ ಮಳೆಯಾಶ್ರಿತ ಪ್ರದೇಶವಾಗಿರುವುದಿಂದ ಈ ಯೋಜನೆ ವರದಾನವಾಗಲಿದೆ. ಕಲಬುರಗಿ ಜಿಲ್ಲೆಯ 1,235 ಮತ್ತು ಬೀದರ‌ ಜಿಲ್ಲೆಯ 900 ಸೇರಿ ಒಟ್ಟು 2,135 ಜನವಸತಿಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಮುಂದಿ‌ನ 2,058 ಜನಸಂಖ್ಯೆ ಅನುಗುಣವಾಗಿ ಡಿ‌.ಪಿ.ಆರ್. ತಯಾರಿಸಿದೆ‌ ಎಂದು ಸಭೆಗೆ ಮಾಹಿತಿ ನೀಡಿದರು.
ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌,ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಬಹುಗ್ರಾಮ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡಬೇಕಾಗುತ್ತದೆ. ಅನೇಕ ಕೇಂದ್ರ ಪುರಸ್ಕೃತ ಯೋಜನೆಗೆಳಿಗೆ ಹಣ ನೀಡಿಲ್ಲ. ಹೀಗಾಗಿ ಇಂದಿನ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಬೇಕು ಎಂದರಲ್ಲದೆ ಆರ್.ಡಿ.ಪಿ.ಆರ್. ಇಲಾಖೆಯು ಸಣ್ಣ ನೀರಾವರ ಇಲಾಖೆಯ ಸಹಯೋಗದೊಂದಿಗೆ ಕಳೆದ 15-20 ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ತುತ್ತಾಗುವ ಗ್ರಾಮಗಳಲ್ಲಿ ಜಲ ಸಮೃದ್ಧಿ ಯೋಜನೆ ರೂಪಿಸಿ ನೀರಿನ ಭದ್ರತೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇನ್ನು ಕೃಷಿ ಇಲಾಖೆ ಚರ್ಚೆ ವೇಳೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಎರಡು ವರ್ಷ ಹಿಂದೆ‌ ನೆಟೆ ರೋಗ, ಈ ವರ್ಷ ಹಚ್ಚಿನ‌ ಮಳೆಯಿಂದ ತೊಗರಿ ಬೆಳೆ ವಿವಿಧ ರೋಗಕ್ಕೆ ತುತ್ತಾಗಿದ್ದರಿಂದ ರೈತರು ಹೈಣಾಗಿದ್ದಾರೆ. ಪ್ರತಿ ವರ್ಷ ಹೀಗೆ ಆದರೆ ರೈತ ಬದುಕು ಕಟ್ಟಿಕೊಳ್ಳೋದು ಹೇಗೆ ಎಂದು ಜಮಡಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರನ್ನು ಪ್ರಶ್ನಿಸಿದ ಅವರು, ಇದಕ್ಲೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾವ ತಳಿಯ ಬೀಜ ಬಿತ್ತಬೇಕೆಂದು ರೈತರಿಗೆ ಬಿತ್ತನೆ ಪೂರ್ವ ಮಾಹಿತಿ ನೀಡಬೇಕು. ಇದು ಅಭಿಯಾನದ ರೂಪದಲ್ಲಿ ಮಾಡಬೇಕು. ಇನ್ನು ಬೆಳೆ‌ ವಿಮೆ ಯೋಜನೆಯಡಿ ಬೆಳೆ ಕಟಾವು ನಂತರ ಬರಬೇಕಾದ ಬೆಳೆ‌ ವಿಮೆ‌ ಸಹ ಸಕಾಲದಲ್ಲಿ ರೈತರಿಗೆ ಪಾವತಿಯಾಗುವಂತೆ ಇಲಾಖೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ತೊಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ನಿಟ್ಟಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಗೆ 431.57 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ಇದೂವರೆಗೆ 247.69 ಕೋಟಿ ರೂ. ಖರ್ಚು ಮಾಡಿ 1,779.98 ಹೆಕ್ಟೇರ್ ಪ್ರದೇಶ ವಿಸ್ತರಣೆಗೆ ರೈತರಿಗೆ ಸಹಾಯ‌ಧನ ನೀಡಲಾಗಿದೆ. ಇದಲ್ಲದೆ ಪಿ.ಎಂ.ಕೃಷಿ‌ ಸಿಂಚಾಯಿ ಯೋಜನೆಯಡಿ 1,210 ಲಕ್ಷ‌ ರೂ., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 14.40 ಲಕ್ಷ ರೂ., ಪರಂಪರಾಗತ ಕೃಷಿ‌ ವಿಕಾಸ‌ ಯೋಜನೆಯಡಿ 56.52 ಲಕ್ಷ ರೂ. ಅನುದಾನ ಜಿಲ್ಲೆಗೆ ಬಿಡುಗಡೆ ಮಾಡಿದೆ ಎಂಸು ತೋಟಗಾರಿಕೆ‌ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ‌ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್. ಸುಮಿತ್ ಪಾಟೀಲ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಸೇರಿದಂತೆ ಕೇಂದ್ರ‌ ಮತ್ತು ರಾಜ್ಯ ಸರ್ಕಾರದ‌ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವರ್ಚುವಲ್ ಮೂಲಕ ಬೀದರ ಸಂಸದ ಸಾಗರ ಖಂಡ್ರೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಡಾ.ಅವಿನಾಶ ಜಾಧವ,‌ ಬಸವರಾಜ ಮತ್ತಿಮೂಡ ಅವರು ಸಹ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net