ಸಂಪಾದಕೀಯ | ಮಕ್ಕಳ ಕಣ್ಮರೆ ಕಳವಳಕಾರಿ

ಸಂಪಾದಕೀಯ ಅಂಕಣ
ಸಂಪಾದಕೀಯ ಅಂಕಣ
Published on
ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ವರ್ಷಕ್ಕೆ ಸರಾಸರಿ 4,000ಕ್ಕೂ ಹೆಚ್ಚು ಮಕ್ಕಳು ಕಣ್ಮರೆಯಾಗುತ್ತಿದ್ದಾರೆ ಎಂಬ ವರದಿಗಳು ನಮ್ಮ ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಸಿಸಿಟಿವಿಗಳ ಕಣ್ಗಾವಲು ಹೆಚ್ಚಿರುವ ‘ಸಿಲಿಕಾನ್ ಸಿಟಿ’ ಬೆಂಗಳೂರೇ ಈ ಕರಾಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಪರ್ಯಾಸ. ದಿನಕ್ಕೆ ಸರಾಸರಿ 10ರಿಂದ 12 ಮಕ್ಕಳು ಬೆಂಗಳೂರಿನಲ್ಲಿ ನಾಪತ್ತೆಯಾಗುತ್ತಿದ್ದಾರೆ.

ಮಕ್ಕಳು ನಾಪತ್ತೆಯಾಗುವುದರ ಹಿಂದೆ ಮಾನವ ಕಳ್ಳಸಾಗಾಣಿಕೆಯ ಜಾಲ ಇರುವ ಸಾಧ್ಯತೆ ದಟ್ಟವಾಗಿದೆ. ಬಾಲಕಾರ್ವಿುಕರಾಗಿ ಮಕ್ಕಳನ್ನು ಬಳಸಿಕೊಳ್ಳುವುದು, ಬಲವಂತದಿಂದ ಭಿಕ್ಷಾಟನೆ ಮಾಡಿಸುವುದು, ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುವಂತಹ ಅನಿಷ್ಟ ಜಾಲಗಳು ಸಕ್ರಿಯವಾಗಿವೆ. ಬೆಂಗಳೂರಿನಂತಹ ನಗರಗಳಲ್ಲಿ ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ಇತರ ಜನನಿಬಿಡ ಪ್ರದೇಶಗಳೇ ಈ ಜಾಲಗಳ ಕಾರ್ಯಕ್ಷೇತ್ರಗಳಾಗಿವೆ. ನೆರೆಯ ರಾಜ್ಯಗಳಿಂದ ಬರುವ ವಲಸೆ ಕಾರ್ವಿುಕರ ಮಕ್ಕಳು ಮತ್ತು ಕೊಳೆಗೇರಿ ನಿವಾಸಿಗಳ ಮಕ್ಕಳು ಈ ಜಾಲಗಳಿಗೆ ಸುಲಭದ ತುತ್ತಾಗುತ್ತಿದ್ದಾರೆ.

ಸ್ಮಾರ್ಟ್ ಸಿಟಿಗಳನ್ನು ರೂಪಿಸುತ್ತಿರುವ ನಾವು, ಮಕ್ಕಳಿಗೆ ಸುರಕ್ಷಿತತೆ ಕಲ್ಪಿಸುವಲ್ಲಿ ಸೋತಿದ್ದೇವೆ. ಪೊಲೀಸ್ ಇಲಾಖೆಯ ‘ಆಪರೇಷನ್ ಮುಸ್ಕಾನ್’ ಅಡಿಯಲ್ಲಿ ಸಾವಿರಾರು ಮಕ್ಕಳನ್ನು ರಕ್ಷಿಸಲಾಗುತ್ತಿದ್ದರೂ, ಮಕ್ಕಳು ನಾಪತ್ತೆಯಾಗುತ್ತಿರುವ ವೇಗಕ್ಕೆ ಹೋಲಿಸಿದರೆ ಪತ್ತೆಯಾಗುತ್ತಿರುವ ಪ್ರಮಾಣ ಕಡಿಮೆ ಇದೆ. ಅನೇಕ ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಿಸಲು ಆಗುವ ವಿಳಂಬ ಮತ್ತು ತನಿಖಾ ಹಂತದಲ್ಲಿ ತೋರುವ ಉದಾಸೀನವೇ ಅಪರಾಧಿಗಳಿಗೆ ವರದಾನವಾಗುತ್ತಿದೆ. ಜತೆಗೆ, ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳನ್ನು ಹಾದಿ ತಪ್ಪಿಸುವ ಜಾಲಗಳೂ ಇತ್ತೀಚೆಗೆ ಹೆಚ್ಚುತ್ತಿವೆ.

ಕೇವಲ ಸರ್ಕಾರವನ್ನು ಅಥವಾ ಪೊಲೀಸರನ್ನು ದೂಷಿಸುವುದರಿಂದ ಈ ಸಮಸ್ಯೆ ಬಗೆಹರಿಯದು. ಇದೊಂದು ಬಹುಮುಖಿ ಹೋರಾಟವಾಗಬೇಕು. ಶಾಲಾ ಹಂತದಲ್ಲೇ ಅಪರಿಚಿತರ ಬಗ್ಗೆ ಎಚ್ಚರಿದಿಂದಿರುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ‘ಗುಡ್ ಟಚ್- ಬ್ಯಾಡ್ ಟಚ್’ ಬಗ್ಗೆ ಶಿಕ್ಷಣ ನೀಡಬೇಕು. ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿಗಳ ಜತೆಗೆ ಮುಖ ಚಹರೆಯನ್ನು ಗುರುತಿಸುವ (ಫೇಷಿಯಲ್ ರೆಕಗ್ನಿಷನ್) ತಂತ್ರಜ್ಞಾನವನ್ನು ಪೊಲೀಸ್ ಇಲಾಖೆಯ ಡೇಟಾದೊಂದಿಗೆ ಸಮನ್ವಯಗೊಳಿಸಬೇಕು. ಪಾಲಕರು ತಮ್ಮ ಮಕ್ಕಳ ಇಂಟರ್ನೆಟ್ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸುತ್ತಿರಬೇಕು. ರಸ್ತೆ ಬದಿ ಭಿಕ್ಷೆ ಬೇಡುವ ಅಥವಾ ಅನುಮಾನಾಸ್ಪದವಾಗಿ ಓಡಾಡುವ ಮಕ್ಕಳನ್ನು ಕಂಡರೆ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡುವ ಪ್ರವೃತ್ತಿ ಬೆಳೆಯಬೇಕು.

ಮಕ್ಕಳ ರಕ್ಷಣೆ ಎಂಬುದು ಕೇವಲ ಕಾನೂನಿನ ಕರ್ತವ್ಯವಲ್ಲ, ಅದು ಸಾರ್ವಜನಿಕರ ನೈತಿಕ ಹೊಣೆಗಾರಿಕೆಯೂ ಹೌದು. ನಾಪತ್ತೆಯಾದ ಪ್ರತಿ ಮಗುವಿನ ಹಿಂದೆ ಒಂದು ಕುಟುಂಬದ ನೋವಿನ ಕಥೆಯಿರುತ್ತದೆ. ಆ ನೋವು ಕೊನೆಗೊಳ್ಳಬೇಕಾದರೆ ಇಡೀ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದ ಬಡ ಕುಟುಂಬಗಳೂ ಈ ಮಕ್ಕಳ ಕಳ್ಳಸಾಗಣೆ ಜಾಲದ ಮುಖ್ಯ ಗುರಿಯಾಗಿವೆ. ತಾಂತ್ರಿಕವಾಗಿ ‘ಟ್ರಾ್ಯಕಿಂಗ್’ ವ್ಯವಸ್ಥೆ ಬಲಪಡಿಸುವುದರ ಜತೆಗೆ, ಪ್ರತಿ ಜಿಲ್ಲೆಯಲ್ಲೂ ಹಗಲಿರುಳು ಕಾರ್ಯ ನಿರ್ವಹಿಸುವ ವಿಶೇಷ ಕಾರ್ಯಪಡೆ ರಚನೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net