

ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಇತ್ತೀಚಿಗೆ ನಡೆಸಲಾಗಿರುವ 51 ಆನೆ ಕಾವಾಡಿಗರ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ ಅರಣ್ಯ ಇಲಾಖೆ ಆದೇಶಿಸಿದೆ.
ಇಲಾಖೆಯಲ್ಲಿ ಖಾಲಿ ಇದ್ದ ಕಾವಾಡಿಗರ ನೇಮಕಕ್ಕೆ ಆರ್ಥಿಕ ಇಲಾಖೆ ಜೂ.7ರಂದು ಅನುಮೋದನೆ ನೀಡಿತ್ತು. ಅದರಂತೆ ಚಾಮರಾಜನಗರ, ಮೈಸೂರು, ಕೊಡಗು, ಶಿವಮೊಗ್ಗ ಮತ್ತು ಕೆನರಾ ಅರಣ್ಯ ವೃತ್ತಗಳಲ್ಲಿ ನೇರ ನೇಮಕಾತಿ ನಡೆಸಲು ಜು.27ರಂದು ಅಧಿಸೂಚನೆ ಹೊರಡಿಸಿತ್ತು.
ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ನಡೆಸಿ 51 ಕಾವಾಡಿಗರನ್ನು ನೇಮಿಸಿ ಪಟ್ಟಿ ಬಿಡುಗೆಗೊಳಿಸಿದ್ದರು. ಪ್ರಕ್ರಿಯೆಯಲ್ಲಿ ಇಲಾಖೆ ಅಧಿಕಾರಿಗಳ ಆಪ್ತರು, ಪಶು ವೈದ್ಯರ ಮಕ್ಕಳಿಗೆ, ಚಾಲಕರ ಮಕ್ಕಳಿಗೆ ಹಾಗೂ ಅನರ್ಹರಿಗೆ ಹುದ್ದೆ ನೀಡಲಾಗಿದೆ ಎಂದು ಅವಕಾಶ ವಂಚಿತರು ಆರೋಪಿಸಿದ್ದರು.
ಇದರಿಂದ ಕ್ರಮಕೈಗೊಂಡಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ (ನೇಮಕಾತಿ ಮತ್ತು ಸಿಬ್ಬಂದಿ) ಸರ್ಕಾರದ ಮುಂದಿನ ಆದೇಶದವರೆಗೂ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಆರೋಪದ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ನಿರ್ದೇಶಿಸಿದ್ದಾರೆ.