Diabetes control through the consumption of quality rice.
Published on:
Copied
Follow Us
ಶಿಡ್ಲಘಟ್ಟ: ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಅಮೆರಿಕದ ವಿಜ್ಞಾನಿಗಳ ತಂಡ ಭಾನುವಾರ ಭೇಟಿ ನೀಡಿ, ಕೇಂದ್ರದಲ್ಲಿ ಆರೋಗ್ಯ ಸೇವೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಶೀಲಿಸಿತು. ಅಲ್ಲದೆ ಶ್ರೀರಾಮಕೃಷ್ಣ ಮಧುಮೇಹ ಕೇಂದ್ರದಲ್ಲಿ ರೋಗಿಗಳೊಂದಿಗೆ ಸಂವಾದ ನಡೆಸಿತು.
ಮಧುಮೇಹ ನಿಯಂತ್ರಣದಲ್ಲಿ ಆಹಾರದ ಪಾತ್ರದ ಕುರಿತು ಮಾಹಿತಿ ನೀಡಿದ ವಿಜ್ಞಾನಿಗಳು, ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ಮಧುಮೇಹ ನಿಯಂತ್ರಿಸಬಹುದು. ಭಾರತದಲ್ಲಿ ಹೆಚ್ಚಾಗಿ ಬಳಸುವ ಅಕ್ಕಿಗೆ ಪರ್ಯಾಯವಾಗಿ ಕಡಿಮೆ ಸಕ್ಕರೆ ಅಂಶ ಹಾಗೂ ಹೆಚ್ಚಿನ ಪೌಷ್ಟಿಕಾಂಶವಿರುವ ಗುಣಮಟ್ಟದ ಅಕ್ಕಿಯ ಬಳಕೆ ಆರೋಗ್ಯಕ್ಕೆ ಸಹಕಾರಿ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಅಗತ್ಯತೆ ಬಗ್ಗೆ ತಿಳಿಸಿದರು.
ವಿಜ್ಞಾನಿ ಭಾರತ್ಲೋಮ್ ಡೀನ್ ಮಾತನಾಡಿ, ಗ್ರಾಮೀಣ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರದ ಕಾರ್ಯ ಶ್ಲಾಘನೀಯ. ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶದಲ್ಲಿ ಬೆಳೆಯುವ ಗುಣಮಟ್ಟದ ಅಕ್ಕಿಯ ಬಳಕೆ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿರುವ ಕುರಿತು ಅಧ್ಯಯನಗಳು ನಡೆಯುತ್ತಿದ್ದು, ಭಾರತದಲ್ಲಿಯೂ ಅದರ ಉಪಯೋಗದ ಸಾಧ್ಯತೆಗಳ ಕುರಿತು ಸಂಶೋಧನೆ ಮುಂದುವರಿದಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಹಾಗೂ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಸಂದೀಪ್ ಮಾತನಾಡಿ, ಕೇಂದ್ರದಲ್ಲಿ 3,000ಕ್ಕೂ ಹೆಚ್ಚು ಮಧುಮೇಹಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜ್ಞಾನಿಗಳು ಸೂಚಿಸಿರುವ ಗುಣಮಟ್ಟದ ಅಕ್ಕಿಯನ್ನು ಪ್ರಾಯೋಗಿಕವಾಗಿ 100 ರೋಗಿಗಳಿಗೆ ವಿತರಿಸಿ, ಅದರ ಪರಿಣಾಮಗಳ ಅಧ್ಯಯನ ಮಾಡಿದ ಬಳಿಕ ಮುಂದಿನ ಕ್ರಮದ ಕುರಿತು ತೀಮಾರ್ನಿಸಲಾಗುವುದು ಎಂದರು.
ಡಾ.ಪ್ರಿಯಾಂಕಾ, ವೀರಕುಮಾರ್, ಸಮತ್ವಂ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ, ಸ್ವಯಂ ಸೇವಕರಾದ ಪ್ರವಿಣ್, ಎನ್.ಮನೋಜ್, ಶ್ರೇಯಸ್, ಮಂಜುನಾಥ್, ನರೇಂದ್ರ, ಮುರಳಿ ಇದ್ದರು.