ಬಬಲೇಶ್ವರ ಪಟ್ಟಣದಲ್ಲಿ ದಿ. ಬಿ.ಎಂ. ಪಾಟೀಲ ಸ್ಮರಣಾರ್ಥ ಹಮ್ಮಿಕೊಂಡಿದ್ದ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ನ್ನು ಬ್ಯಾಟಿಂಗ್ ಮಾಡುವ ಮೂಲಕ ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಮಹೇಶ ಮಾಳಿ, ಶಾಂತಯ್ಯ ಕರೆಗೊಳ, ಬಸನಗೌಡ ಬಿ.ಎಂ. ಮತ್ತಿತರರಿದ್ದರು.
ವಿಜಯಪುರ: ಕ್ರಿಕೆಟ್ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ ಎಂದು ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ದಿ. ಬಿ.ಎಂ. ಪಾಟೀಲ ಸ್ಮರಣಾರ್ಥ ಬಬಲೇಶ್ವರ ಪಟ್ಟಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್‌ನ್ನು ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ತಂದೆ ದಿ. ಬಿ.ಎಂ. ಪಾಟೀಲರ ಹೆಸರಿನಲ್ಲಿ ಈ ಟೂರ್ನಮೆಂಟ್ ಆಯೋಜನೆ ಮಾಡಿರುವುದು ಸಂತಸದ ಸಂಗತಿ. ಬಿ. ಎಂ. ಪಾಟೀಲರು ಶಿಕ್ಷಣ ಪ್ರೇಮಿಗಳಾಗಿದ್ದು, ಇಲ್ಲಿನ ಯುವಕರು ಹೆಚ್ಚಿನ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆದಾಡುವುದು ಮತ್ತು ಬಡವರು ಶಿಕ್ಷಣವನ್ನು ಮೊಟಕುಗೊಳಿಸುವುದನ್ನು ತಡೆಯಲು ಬಿಎಲ್ಡಿಇ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಶಾಲೆ, ಕಾಲೇಜು ಮತ್ತು ಕೋರ್ಸುಗಳನ್ನು ಪ್ರಾರಂಭಿಸುವ ಮೂಲಕ ಪ್ರೋತ್ಸಾಹ ನೀಡಿದ್ದರು.
ಅಲ್ಲದೆ, ಬೇರೆಯವರ ಸಂಸ್ಥೆಗಳ ಅಭಿವೃದ್ಧಿಗೂ ನೆರವು ನೀಡಿದ್ದರು. ಸದ್ಯ ನನ್ನ ಸಹೋದರ ಮತ್ತು ಸಚಿವ ಎಂ.ಬಿ. ಪಾಟೀಲರು ಜಲಕ್ರಾಂತಿಯ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಕೆಜಿಯಿಂದ ಪಿಜಿವರೆಗೆ ಇಲ್ಲಿಯೇ ಶಿಕ್ಷಣ ಸಿಗುತ್ತಿದೆ ಎಂದರು.
ಕ್ರಿಕೆಟ್ ಟೂರ್ನಮೆಂಟ್‌ಗಳು ಪ್ರತಿಭಾವಂತ ಕ್ರೀಡಾಪಟುಗಳ ಕೌಶಲ ಹೊರಹಾಕಲು ಉತ್ತಮ ವೇದಿಕೆಗಳು. ಒಗ್ಗಟ್ಟಿನಿಂದ ಹೋರಾಡಿ ಗೆಲುವು ಸಾಧಿಸಲು ಪ್ರೇರಣೆ ನೀಡುತ್ತದೆ. ಎಲ್ಲರೂ ಸ್ಪರ್ಧಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಬಿಎಲ್‌ಡಿಇ ಸಂಸ್ಥೆ ವತಿಯಿಂದ ಬಿ.ಎಂ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ವಿವಿಧ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿರುವ ಯುವ ಕ್ರಿಕೆಟಿಗ ಅಕ್ಷಯ ಬಿರಾದಾರ ಅವರನ್ನು ಶಾಸಕರು ಸನ್ಮಾನಿಸಿದರು. ಶಾಂತಯ್ಯ ಕರೆಗೊಳ ಸಾನ್ನಿಧ್ಯ ವಹಿಸಿದ್ದರು.