congress undevelopment ಗುಬ್ಬಿ: ರಾಜ್ಯ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ, ಈ ಕಾಂಗ್ರೆಸ್ಗೆ ನಾಚಿಕೆ ಆಗಬೇಕು ಎಂದು ಜೆಡಿಎಸ್ ಯುವಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಗುಬ್ಬಿ ತಾಲೂಕಿನ ಬೆಲವತ್ತ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ವಿಮಾನ ಗೋಪುರ ಕಳಸ ಸ್ಥಾಪನೆ ಮಹೋತ್ಸವದಲ್ಲಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಹಣವಿಲ್ಲದ ಕಾರಣ ಅಭಿವೃದ್ಧಿ ಕುಂಟಿತವಾಗಿದೆ. ಕ್ಷೇತ್ರದ ಶಾಸಕರಿಗೆ ಅನುದಾನವಿಲ್ಲದೆ ವರದಾಡುವ ಸ್ಥಿತಿ ನಿಮಾರ್ಣ ಮಾಡಿದ್ದಾರೆ. ರಾಜ್ಯದ ರೈತರನ್ನು ಕಾಂಗ್ರೆಸ್ ಸರ್ಕಾರ ದಿವಾಳಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಗುಬ್ಬಿ ಜೆಡಿಎಸ್ ಭದ್ರಕೋಟೆ ಎಂಬುದನ್ನು ಈಗಾಗಲೇ ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್. ನಾಗರಾಜ್ ಅವರು ಮುಂಚೂಣಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ 43,000 ಮತ ಹಾಕಿ ಜೆಡಿಎಸ್ ಬಲಿಷ್ಠವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಯಾರನ್ನು ನಂಬಿಕೊಂಡು ಕೆಲಸ ಮಾಡುತ್ತಿಲ್ಲ. ನಮ್ಮ ಕಾರ್ಯಕರ್ತರು ಶಕ್ತಿಯಾಗಿ ಗುಬ್ಬಿಯಲ್ಲಿದ್ದಾರೆ. ಮಾತಾಡುವಾಗ ಮಾತಲ್ಲಿ ನಿಗಾ ಇರಬೇಕು. ನಾನು ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಯಕರ್ತರಿಗೆ ಗೊತ್ತಾಗಿಯೇ ಆಗುತ್ತದೆ ಎಂದು ಪರೋಕ್ಷವಾಗಿ ಹೆಸರು ಹೇಳದೆ ಶಾಸಕ ಶ್ರೀನಿವಾಸ್ ವಿರುದ್ಧ ಗುಡುಗಿದರು.
ಶಾಸಕ ಎಂ.ಟಿ. ಕೃಷ್ಣಪ್ಪ, ಮುಖಂಡರಾದ ಬಿಎಸ್ ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಯೋಗಾನಂದ ಕುಮಾರ್, ರಘು, ಗ್ರಾಪಂ ಅಧ್ಯಕ್ಷ ಲತಾ ದಯಾನಂದ್ ಸೇರಿದಂತೆ ಎಲ್ಲ ಗ್ರಾಮಸ್ಥರು, ಕಾರ್ಯಕರ್ತರು ಇದ್ದರು.