ತವರು ನೆಲ ಹಾಸನದಲ್ಲಿ ಬಾಂಧವ್ಯ ಬೆಸೆದ ದೇವೇಗೌಡರು; ರೇವಣ್ಣ ರಾಜಕೀಯ ಪಡಸಾಲೆಯಲ್ಲಿ ಎಚ್ಡಿಕೆ ವಿಶ್ವಾಸದ ಹೆಜ್ಜೆ; ಜೆಡಿಎಸ್ ಸಂಘಟನೆಗೆ ಹೊಸ ಭರವಸೆ ಹುಟ್ಟು ಹಾಕಿದ ಸಮಾವೇಶ

 ಹೆಚ್.ಡಿ. ದೇವೇಗೌಡ
ಹೆಚ್.ಡಿ. ದೇವೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಹೋದ ಗತ ವೈಭವದ ದಿನಗಳನ್ನು ನೆನಪು
  • ಅನಿವಾರ್ಯವಾಗಿ ಎಂಟ್ರಿಕೊಟ್ಟಿದ್ದ ಎಚ್.ಡಿ.ಕುಮಾರಸ್ವಾಮಿ
  • ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಸಂಘಟಿತವಾಗಿ, ವಾಗ್ದಾಳಿ
ಶಿವಾನಂದ ತಗಡೂರು, ಬೆಂಗಳೂರು:
ಜೆಡಿಎಸ್, ಪ್ರಾದೇಶಿಕ ಪಕ್ಷವಾಗಿ ಬೆಳ್ಳಿ ಹಬ್ಬದ ಸಂಭ್ರಮವನ್ನು ದೇವೇಗೌಡರ ತವರು ಹಾಸನದ ತವರಿನಲ್ಲಿ ಭರ್ಜರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ತನ್ನ ಸಂಪ್ರದಾಯಿಕ ವಿರೋಧಿ ಕಾಂಗ್ರೆಸ್ ವಿರುದ್ದ ಮುಗಿ ಬಿದ್ದಿದೆ.
ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಸಂಘಟಿತವಾಗಿ, ವಾಗ್ದಾಳಿ ನಡೆಸುವ ಮೂಲಕ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತದೆ ಪಕ್ಷ ಸಂಘಟನೆಯ ಕಿಚ್ಚು ಹುಟ್ಟು ಹಾಕುವ ಪ್ರಯತ್ನವನ್ನು ಮಾಡಲಾಗಿದೆ.
ಹಾಸನದಲ್ಲಿ ಸಮಾವೇಶ ಮಾಡಬೇಕು ಎನ್ನುವುದು ನೆಪ ಮಾತ್ರವಷ್ಟೆ. ಅದರ ಗುರಿ ಮತ್ತು ನೋಟ ಸ್ಪಷ್ಟವಿತ್ತು. ಕಳೆದ ಹೋದ ಗತ ವೈಭವದ ದಿನಗಳನ್ನು ನೆನಪು ಮಾಡಿಕೊಡುವ ಮೂಲಕ ತಳಮಟ್ಟದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಉತ್ಸಾಹವನ್ನು ತುಂಬುವ ಮತ್ತು ತನ್ನ ಸಂಪ್ರದಾಯಿಕ ನೆಲೆಗಳನ್ನು ಭದ್ರಗೊಳಿಸುವ ಕೆಲಸವನ್ನು ದೇವೇಗೌಡರ ಸಮ್ಮುಖದಲ್ಲಿ ದಳಪತಿಗಳು ಯಶಸ್ವಿಯಾಗಿ ಮಾಡಿದ್ದಾರೆ.
ಅನೇಕ ರಾಜಕೀಯ ಏಳು ಬೀಳುಗಳನ್ನು ಕಂಡಿರುವ ದೇವೇಗೌಡರಿಗೆ ಈ ಸಮಾವೇಶ ಬಹಳ ಮಹತ್ವದ್ದಾಗಿತ್ತು. ನಾನಾ ಕಾರಣಗಳಿಗಾಗಿ ಜರ್ಜರಿತವಾಗಿ ಹೋಗಿದ್ದ ಜೆಡಿಎಸ್‌ಗೆ ಪುನಶ್ಚೇತನ ನೀಡುವುದು ಅದರಲ್ಲೂ ಎಚ್.ಡಿ.ರೇವಣ್ಣ ಅವರ ಕಾರ್ಯಕ್ಷೇತ್ರವಾದ ಹಾಸನದಲ್ಲಿ ಮಾಡುವುದು ಮುಖ್ಯವಾಗಿತ್ತು. ಹಾಸನದಲ್ಲಿ ಹಳಿ ತಪ್ಪಿದ್ದ ಜೆಡಿಎಸ್ ಸಂಘಟನೆಯ ಲಯವನ್ನು ಮತ್ತೆ ಟ್ರ್ಯಾಕ್‌ನಲ್ಲಿ ತಂದು ರೇವಣ್ಣ ಅವರ ಕೈಗೆ ನೀಡುವ ಕೆಲಸವನ್ನು ಮಾಡುವ ತುರ್ತು ಅವರಿಗಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬಾರದ ಕಾರಣ, ಇನ್ನೇನು ಜೆಡಿಎಸ್ ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಕೈ ಹಿಡಿದು, ಮೈತ್ರಿ ಬೆಸುಗೆಯಲ್ಲಿ ಲೋಕಸಭೆ ಚುನಾವಣೆಗೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಂಡಿದ್ದು ಇತಿಹಾಸ.
ಆ ನಂತರದಲ್ಲಿ ನಡೆದ ಪ್ರಜ್ವಲ್ ರೇವಣ್ಣ ಪ್ರಕರಣ, ಎಚ್.ಡಿ.ರೇವಣ್ಣ ಬಂಧನ ಪ್ರಕರಣಗಳು ಜೆಡಿಎಸ್‌ನ ಆತ್ಮಸ್ಥೈರ್ಯವನ್ನು ಘಾಸಿಗೊಳಿಸಿದ್ದವು. ಈ ಎಲ್ಲ ಬೆಳವಣಿಗೆಗಳು ದೇವೇಗೌಡರಿಗೆ ಅರಗಿಸಿಕೊಳ್ಳಲಾರದ ಸಂಗತಿಗಳಾಗಿದ್ದವು.
ಹಾಸನ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತಮ್ಮ ಆಪ್ತ ವಲಯದಲ್ಲಿದ್ದ ಮುಖಂಡರು, ಆರ್ಥಿಕ ಶಕ್ತಿ ತುಂಬುತ್ತಿದ್ದವರು ನಿದಾನವಾಗಿ ಬದಿಗೆ ಸರಿದಿದ್ದದ್ದರು. ಇದೆಲ್ಲವನ್ನೂ ಮತ್ತೆ ಹಳಿಗೆ ತರುವ ಮೂಲಕ ಜೆಡಿಎಸ್‌ಗೆ ಮರು ಚೈತನ್ಯ ನೀಡಬೇಕು ಎನ್ನುವುದು ಗೌಡರ ಇಚ್ಛಾಶಕ್ತಿಯಾಗಿತ್ತು. ಅದಕ್ಕೆ ಈ ಹಾಸನದ ಸಮಾವೇಶ ಸಂಪೂರ್ಣವಾಗಿ ಸಾಥ್ ನೀಡಿದೆ ಎಂದು ಜೆಡಿಎಸ್ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಯುವ ನಾಯಕನೆಂದು ಬಿಂಬಿಸಿಕೊಂಡು, ತನ್ನ ಚಿಕ್ಕಪ್ಪನ ವಿರುದ್ದವೇ ಗುಟುರು ಹಾಕಿದ್ದ ಪ್ರಜ್ವಲ್ ರೇವಣ್ಣ, ತನ್ನದೇ ತಪ್ಪಿಗಾಗಿ, ರಾಜಕೀಯ ನೇಪಥ್ಯಕ್ಕೆ ಸರಿದದ್ದು ಒಂದೆಡೆಯಾದರೆ, ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಕುಟಂಬಕ್ಕೆ ಮಾತ್ರವೇ ಮಹತ್ವ ಸಿಗುತ್ತಿರುವುದಕ್ಕೆ ದೊಡ್ಡಗೌಡರ ಮುಂದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಭವಾನಿ ರೇವಣ್ಣ ಅವರು ರಾಜಕೀಯ ಮೌನಕ್ಕೆ ಶರಣಾದ ಘಟನೆಗಳು ಕಾಕತಾಳೀಯ.
ಈ ಘಟನೆಗಳ ನಡುವೆಯೇ ಅನಿವಾರ್ಯವಾಗಿ ಎಂಟ್ರಿಕೊಟ್ಟಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನ ರಾಜಕಾರಣಕ್ಕೂ ತನ್ನ ನೆಲೆಯ ಮುದ್ರೆ ಒತ್ತಿದ್ದಾರೆ. ಆ ಮೂಲಕ ರೇವಣ್ಣ ಅವರಿಗೆ ಶಕ್ತಿ ತುಂಬುವ ಮತ್ತು ಜೊತೆಯಲ್ಲಿಯೇ ಹೆಜ್ಜೆ ಇಡುವ ವಿಶ್ವಾಸವನ್ನು ಜನಸಾಗರದ ನಡುವೆ, ದೇವೇಗೌಡರ ಸಮ್ಮುಖದಲ್ಲಿಯೇ ಬಿತ್ತಿರುವುದು ಹೊಸ ಬೆಳವಣಿಗೆ. ಇದು ಭವಿಷ್ಯದಲ್ಲಿ ಹಸನಾದ ಸಲು ತರಬಹುದು ಎನ್ನುವುದು ಜೆಡಿಎಸ್ ನಿರೀಕ್ಷೆ. ಗೌಡರ ತವರಿನ ಸಮಾವೇಶ ಜೆಡಿಎಸ್ ಸಂಘಟನೆ ದೃಷ್ಟಿಯಿಂದ ಒಂದಷ್ಟು ಹೊಸ ಭರವಸೆಗಳನ್ನು ಹುಟ್ಟುಹಾಕಿರುವುದಂತೂ ನಿಜ.

ತಳಮಟ್ಟದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಉತ್ಸಾಹವನ್ನು ತುಂಬುವ ಮತ್ತು ತನ್ನ ಸಂಪ್ರದಾಯಿಕ ನೆಲೆಗಳನ್ನು ಭದ್ರಗೊಳಿಸುವ ಕೆಲಸವನ್ನು ದೇವೇಗೌಡರ ಸಮ್ಮುಖದಲ್ಲಿ ಯಶಸ್ವಿಯಾಗಿ ಮಾಡಿದೆ -ಎಚ್.ಡಿ.ಕುಮಾರಸ್ವಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net