ಸೇಡಂನಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಪುತ್ಥಳಿ ಎದುರು ದಲಿತ ಸಂರ್ಷ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಎಸಿ ಪ್ರಭುರೆಡ್ಡಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಜಗನ್ನಾಥ ಬಿಜನಳ್ಳಿ, ಶಿವಪುತ್ರಪ್ಪ ಮೋಘಾ, ಶ್ರೀಶೈಲ್ ಎಂ.ಜಿ., ರಾಮು ಕಣೇಕಲ್ ಇತರರಿದ್ದರು.
ಸೇಡಂ: ಕಳೆದ ಕೆಲ ದಿನಗಳ ಹಿಂದೆ ನಗರಸಭೆ ಅಧಿಕಾರಿಗಳು ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಆದರೆ ರಸ್ತೆಯನ್ನು ಅತಿಕ್ರಮಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳದೆ ಮೌನವಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ಜಿಲ್ಲಾಧ್ಯಕ್ಷ ಜಗನ್ನಾಥ ಬಿಜನಳ್ಳಿಕರ್ ದೂರಿದರು.
ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಧರಣಿಯಲ್ಲಿ ಮಾತನಾಡಿ, ಬಸ್ ನಿಲ್ದಾಣದಿಂದ ಬಸವೇಶ್ವರ ವೃತದವರೆಗೆ ಪಾದಚಾರಿ ಮಾರ್ಗ ಸಂಪೂರ್ಣ ಅತಿಕ್ರಮಣ ಮಾಡಲಾಗಿದೆ. ಇವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೆ ಅತಿಕ್ರಮಣ ತೆರವಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಶುಕ್ರವಾರ ಧರಣಿ ಆರಂಭವಾಗಿದ್ದು, ಶನಿವಾರ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಪೌರಾಯುಕ್ತ ಶರಣಯ್ಯಸ್ವಾಮಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.