ಹನೂರು: ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂರು ರೈತ ಸಂಘಟನೆ ವತಿಯಿಂದ ಹನೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪೆಟ್ರೋಲ್ ಬಂಕ್ ಬಳಿ ನೆರೆದಿದ್ದ ನೂರಾರು ರೈತರು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ ಮೆರವಣಿಯೊಂದಿಗೆ ಮುಖ್ಯ ರಸ್ತೆಯ ಮೂಲಕ ಆಗಮಿಸಿ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಜಮಾಯಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಮಾತನಾಡಿ, ಹನೂರು ಭಾಗದಲ್ಲಿ ಇತ್ತೀಚಿಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿರುವುದು ಒಂದಡೆಯಾದರೆ, ಚಿರತೆ ಹಾವಳಿಯಿಂದ ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ರೈತರು ನಷ್ಟವನ್ನು ಅನುಭವಿಸುವುದರ ಜತೆಗೆ ಸಮಸ್ಯೆಯನ್ನು ಎದುರಿಸುವಂತಾಗಿದೆ. ಆದರೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಇನ್ನು ಮುಂದಾದರೂ ಈ ಬಗ್ಗೆ ಕ್ರಮಕೈಗೊಂಡು ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ತಂತಿ ಬೇಲಿ ಅಳವಡಿಸಬೇಕು. ಜತೆಗೆ ಬೋನ್ ಇರಿಸಿ ಚಿರತೆ ಸೆರೆ ಹಿಡಿಯಬೇಕು. ಕೋತಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು. ಜತೆಗೆ ಅರಣ್ಯದಂಚಿನ ಗ್ರಾಮಗಳಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಮಲ್ಲಯ್ಯನಪುರ ಭಾಗದಲ್ಲಿ ಎರಡು ವರ್ಷದಿಂದಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯದಂಚಿನ ಜಮೀನಿಗಳಿಗೆ ಆಗ್ಗಾಗ್ಗೆ ಲಗ್ಗೆ ಇಡುತ್ತಲೇ ಇವೆ. ಫಸಲು, ನೀರಾವರಿ ಪರಿಕರ ಹಾಗೂ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸುತ್ತಿವೆ. ಆದರೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕುತ್ತಿಲ್ಲ. ಇದರಿಂದ ರೈತರು ಸಮಸ್ಯೆಯಿಂದ ನಲುಗುವಂತಾಗಿದೆ ಎಂದು ಕಿಡಿಕಾರಿದರು.
ರೈಲ್ವೆ ಬ್ಯಾರಿಕೇಡ್ ಅಳವಡಿಕೆ: ಈ ವೇಳೆ ಡಿಸಿಎಫ್ ಸುರೇಂದ್ರ ಮಾತನಾಡಿ, ಕಾವೇರಿ ವನ್ಯಜೀವಿ ವಿಭಾಗದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟು ಸಲುವಾಗಿ 19.50 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಡಿಪಿಆರ್ ತಯಾರಿಸಿದ್ದು, ಸರ್ಕಾರದಿಂದ ಅನುದಾನ ಬಂದ ಕೂಡಲೇ ಈ ಕೆಲಸ ಕೈಗೊಳ್ಳಲಾಗುವುದು. ಅಲ್ಲದೆ 24 ಕಿ.ಮೀ ಸೋಲಾರ್ ತಂತಿ ಬೇಲಿ ನಿರ್ಮಿಸಲು ಕ್ರಮವಹಿಸಲಾಗುವುದು. ಚಿರತೆ ಸೆರೆ, ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಈ ಸಂದರ್ಭದಲ್ಲಿ ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒಗಳಾದ ನಿರಂಜನ್, ನಾಗರಾಜು ಹಾಗೂ ಇನ್ನಿತರರು ಇದ್ದರು.