ಹಾಲಿನ ಖರೀದಿ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ಆನೇಕಲ್ನ ಕರುನಾಡು ರೈತ ಗೋಪಾಲಕರ ಸಂದಿಂದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್, ಬಮುಲ್ ನಿರ್ದೇಶಕ ಆರ್.ಕೆ. ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರುನಾಡು ರೈತ ಗೋಪಾಲಕರ ಸಂಘದ ಅಧ್ಯಕ್ಷ ಎಸ್. ಮುನಿರಾಜು, ತಾಲೂಕು ಅಧ್ಯಕ್ಷರಾದ ದಿಲೀಪ್ ಗೌಡ, ಮುರುಗೇಶ್, ಶ್ರೀನಿವಾಸ್, ವೆಂಕಟೇಶ್ ಇದ್ದರು.
ಆನೇಕಲ್ : ಹಾಲಿನ ಖರೀದಿ ದರ ಹೆಚ್ಚಿಸಬೇಕು ಹಾಗೂ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಕರುನಾಡು ರೈತ ಗೋಪಾಲಕರ ಸಂಘದ ನೇತೃತ್ವದಲ್ಲಿ ಸೋಮವಾರ ಆನೇಕಲ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಚಿಕ್ಕಹಾಗಡೆ ಚೇತನ್ ಚಿಕ್ಕಣ್ಣ ಅವರು ತಹಸೀಲ್ದಾರ್ ಎದುರಲ್ಲೇ ಮೈಮೇಲೆ ಹಾಲು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಿಂದ ಹೊರಟ ನೂರಾರು ರೈತರ ಮೆರವಣಿಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಬಮುಲ್ ಆನೇಕಲ್ ಶಿಬಿರ ಹಾಗೂ ತಾಲೂಕು ಕಚೇರಿ ತಲುಪಿತು. ನಂತರ ಬಮುಲ್ ನಿರ್ದೇಶಕ ಆರ್.ಕೆ. ರಮೇಶ್ ಅವರಿಗೆ ರೈತರ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿತು.
ಪ್ರಸ್ತುತ ಸಿಗುತ್ತಿರುವ ಹಾಲಿನ ದರವನ್ನು ಪ್ರತಿ ಲೀಟರ್ಗೆ 35 ರೂ. ನಿಂದ 50 ರೂ. ವರೆಗೆ ತಕ್ಷಣವೇ ಹೆಚ್ಚಿಸಬೇಕು. ದಿನೇದಿನೆ ಏರಿಕೆಯಾಗುತ್ತಿರುವ ಪಶು ಆಹಾರದ ಬೆಲೆಯನ್ನು ಗಣನೀಯವಾಗಿ ಇಳಿಸಬೇಕು. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಹಾಲು ಉತ್ಪಾದಕ ಸದಸ್ಯರಿಗೆ ಸೂಕ್ತ ಸಾಲ ಸೌಲಭ್ಯ ಒದಗಿಸಬೇಕೆಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಹೈನುಗಾರರಿಗೆ ಸಮಸ್ಯೆಯಾಘಿದೆ. ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.