ಇದೇ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಕೂಡ್ಲೂರು ಶ್ರೀಧರಮೂರ್ತಿ, ರೈತರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ಹೋರಾಟದಲ್ಲಿ ತೊಡಗಿಸಿಕೊಳ್ಳಲಾಗುವುದು. ಅರಣ್ಯದೊಳಗಿನ ದಿಬ್ಬ ಒಡೆದು ಹಳ್ಳದ ನೀರು ಡ್ಯಾಂನತ್ತ ಹರಿಸಬೇಕೆ ಅಥವಾ ಕಬಿನಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಡ್ಯಾಂಗೆ ನೀರು ತುಂಬಿಸಬೇಕೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಿ ರೈತರಿಗೆ ಅನುಕೂಲವಾಗುವ ರೀತಿ ಸರಣಿ ಸಭೆಗಳು, ಧರಣಿ ಕೈಗೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗೌಡಹಳ್ಳಿ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ ಗ್ರಾಮಗಳಿಂದ ಆಗಮಿಸಿದ್ದ ರೈತರು ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಭೆ ಸೇರಿ ಗೌಡಹಳ್ಳಿ, ವಡಗೆರೆ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ, ಬೂದಿತಿಟ್ಟು ಗ್ರಾಮಗಳ ರೈತರಿಗೆ ಸೇರಿದ ಸುಮಾರು 800 ಎಕರೆಗೆ ಹೆಚ್ಚು ಒಣಭೂಮಿ ಇದ್ದು, ಸಕಾಲಕ್ಕೆ ಮಳೆಯಾಗದಿದ್ದರೆ ಸಂಪೂರ್ಣ ಬರದಿಂದ ಸಮಸ್ಯೆ ಎದುರಿಸಬೇಕಿದೆ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗೌಡಹಳ್ಳಿ ಹೊಸಹಳ್ಳಿ ಡ್ಯಾಂ ನಲ್ಲಿ ನೀರು ಸಂಗ್ರಹವಾದರೆ ಈ ಭಾಗದ ರೈತರ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಈ ಡ್ಯಾಂಗೆ ಸಮೀಪದಲ್ಲಿರುವ ಆಮೆಕೆರೆ ಬಳಿ ದೊಡ್ಡದಾದ ದಿಬ್ಬವಿದ್ದು, ಅದರ ಸಮೀಪದಲ್ಲಿ ಮಳೆಗಾಲದಲ್ಲಿ ಹಳ್ಳವು ತುಂಬಿ ಹರಿಯುತ್ತದೆ. ಆ ನೀರು ಡ್ಯಾಂಗೆ ತುಂಬಲು ದಿಬ್ಬವು ಅಡ್ಡಲಾಗಿದ್ದು, ಅದನ್ನು ಒಡೆದರೆ ನಿರಾಯಾಸವಾಗಿ ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದನ್ನು ಹೊರತುಪಡಿಸಿದರೆ ಕಬಿನಿ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ನಮ್ಮೂರಿನ ಡ್ಯಾಂಗೂ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯಗಳು ರೈತರಿಂದ ವ್ಯಕ್ತವಾದವು.
ಮುಖಂಡರಾದ ರಾಜಪ್ಪ, ಚಿನ್ನಸ್ವಾಮಿ, ಸಿದ್ದಪ್ಪ, ಗೋವಿಂದಶೆಟ್ಟಿ, ನಾಗರಾಜು, ಮಹದೇವಶೆಟ್ಟಿ, ಕೊಂಡೇಗೌಡ, ಮಲ್ಲಿಕಾರ್ಜುನ, ಗಣಿಗನೂರು ಮಹೇಶ್ ಇತರರು ಇದ್ದರು.