ಆಹಾ ಮಡಕೆ ನೀರು, ಬೇಡಿಕೆ ಜೋರು!

ಮಣ್ಣಿನ ಮಡಿಕೆ ಹೆಚ್ಚಿದ ಬೇಡಿಕೆ
ಮಣ್ಣಿನ ಮಡಿಕೆ ಹೆಚ್ಚಿದ ಬೇಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • * ಮಾರುಕಟ್ಟೆ, ರಸ್ತೆಗಳಲ್ಲಿ ಗರಿಗೆದರಿದ ವ್ಯಾಪಾರ
  • * ಮನಸ್ಸಿಗೂ ಹಿತ, ಸ್ವಾಸ್ಥ್ಯಕ್ಕೂ ಲಾಭ
ಬೆಂಗಳೂರು: ಬೇಸಿಗೆ ಆರಂಭದಲ್ಲೇ ತಾಪಮಾನ ತೀವ್ರವಾಗಿ ಹೆಚ್ಚಿದ್ದು, ಜನರು ದಣಿವಾರಿಸಿಕೊಳ್ಳಲು ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಮಣ್ಣಿನ ಪಾತ್ರೆ ಹಾಗೂ ಮಡಕೆಗಳಿಗೆ ಬೇಡಿಕೆ ಹೆಚ್ಚಿದೆ.
ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆಗುಂಪಾಗುತ್ತಿರುವ ಈ ಕಾಲಘಟ್ಟದಲ್ಲಿ ಕುಂಬಾರಿಕೆ ಕಷ್ಟಕರವಾಗಿದೆ. ಆದಾಗಿಯೂ ಮಡಕೆ ತನ್ನ ರೂಪು ಬದಲಾಯಿಸಿಕೊಂಡು ತನ್ನತನ ಉಳಿಸಿಕೊಂಡಿದೆ. ಅಲ್ಲದೆ ಮಡಕೆಯಲ್ಲಿನ ನೀರು ಸಂಗ್ರಹಿಸಿಟ್ಟರೆ ಅದರ ರುಚಿಯೇ ಬೇರೆ. ಹಾಗಾಗಿ ಜನರೂ ಸಹ ಬಿಸಿಲ ಬೇಗೆಯಿಂದ ಪಾರಾಗಲು ಮಡಕೆಗಳತ್ತ ಮುಖ ಮಾಡುತ್ತಿದ್ದಾರೆ.
ನಗರದ ನಾಗರಬಾವಿ ರಿಂಗ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಹೌಸಿಂಗ್ ಬೋರ್ಡ್, ವಿಜಯನಗರ, ಮಲ್ಲೇಶ್ವರ, ಯಶವಂತಪುರ ಸೇರಿ ಪ್ರಮುಖ ರಸ್ತೆಗಳಲ್ಲಿ ಮಡಕೆ ಮಾರಾಟ ಗರಿಗೆದರಿದೆ. ವಿಭಿನ್ನ ಆಕಾರದ ಆಕರ್ಷಕ ಬಣ್ಣಗಳ ಚಿತ್ತಾರಗಳೊಂದಿಗೆ ಮಡಕೆಗಳು ಜನಾಕರ್ಷಿಸುತ್ತಿವೆ. 150 ರೂ. ನಿಂದ 500 ರೂ. ವರೆಗೂ ಮಾರಾಟವಾಗುತ್ತಿವೆ.

ಮಣ್ಣಿನ ಬಾಟಲ್ಗಳು:

ಮಡಕೆಯೇ ಜತೆ ಮಣ್ಣಿನಿಂದ ನೀರಿನ ಬಾಟಲ್, ಜಗ್, ಲೋಟಗಳು ಸಹ ಮಾರಾಟಗೊಳ್ಳುತ್ತಿವೆ. ಮಡಕೆಯಲ್ಲಿ ನೀರು ಸದಾ ಕಾಲ ತಣ್ಣಗಿದ್ದು, ಹಿತಾನುಭವ ನೀಡುತ್ತದೆ. ಹಾಗಾಗಿ ಗಾಜಿನ, ತಾಮ್ರದ ಹಾಗೂ ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಬಹುತೇಕರು ಮಣ್ಣಿನ ಬಾಟಲ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕಚೇರಿಗಳಲ್ಲಿ ಕೆಲವರ ಟೇಬಲ್ ಮೇಲೆ ಮಣ್ಣಿನ ಜಗ್ ಹಾಗೂ ಬಾಟಲ್ ಅಲಂಕೃತಗೊಂಡಿವೆ.

ಆರೋಗ್ಯಕ್ಕೆ ಪೂರಕ:

ಮಡಕೆಗೆ ವಿದ್ಯುತ್ ಬೇಕಿಲ್ಲ. ಆರೋಗ್ಯ ಸಮಸ್ಯೆಯೂ ಇಲ್ಲ, ಆರೋಗ್ಯ ತಜ್ಞರೂ ಸಹ ಮಡಕೆ ನೀರನ್ನು ಬೆಂಬಲಿಸುತ್ತಾರೆ. ಹೀಗಾಗಿ ಇಷ್ಟು ಕಾಲ ನಾನ್‌ಸ್ಟಿಕ್ ತವಾ, ಪಾತ್ರೆಗಳನ್ನು ಬಳಸುತ್ತಿದ್ದ ಮಂದಿ ಇತ್ತೀಚಿನ ದಿನಗಳಲ್ಲಿ ಅಡುಕೆ ತಯಾರಿಸಲು ಮಣ್ಣಿನ ಪಾತ್ರೆಗಳು, ತವಾಗಳನ್ನು ಉಪಯೋಗಿಸಲು ಆರಂಭಿಸಿದ್ದಾರೆ. ಇದರೊಂದಿಗೆ ಕುಂಬಾರಿಕೆಗೆ ಮರುಜೀವ ಬಂದಂತಾಗಿದೆ.

ಗ್ರಾಮೀಣರಲ್ಲಿ ಇಂದಿಗೂ ಬಳಕೆ:

ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಇಂದಿಗೂ ಮಡಕೆ ಬಳಕೆ ರೂಢಿಯಲ್ಲಿದೆ. ಪ್ರತಿ ಬೇಸಿಗೆಯಲ್ಲೂ ಹೊಸ ಮಡಿಕೆ ಖರೀದಿಸುವುದನ್ನು ಬಿಟ್ಟಿಲ್ಲ. ಅನೇಕ ಕುಟುಂಬಗಳು ಅಡುಗೆ ಮಾಡುವ ಪರಿಕರಗಳಾಗಿ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದಾರೆ. ಆದರೂ, ಅಂತಹವರ ಸಂಖ್ಯೆ ಅತಿವಿರಳ. ಹಿಂದೆಲ್ಲ ಹಳ್ಳಿಗಳಲ್ಲಿ ದವಸ ಧಾನ್ಯಗಳನ್ನೂ ಸಹ ಮಡಿಕೆಯಲ್ಲಿಯೇ ಸಂಗ್ರಹಿಸಿಡುತ್ತಿದ್ದರು. ಆದರೆ ಕಾಲಕ್ರಮೇಣ ಬದಲಾವಣೆಯ ಗಾಳಿಗೆ ಸಿಲುಕಿ ಇಂದು ಅಡುಗೆ ಮನೆಯಿಂದ ಮಣ್ಣಿನ ಮಡಿಕೆಗಳು ನಾಪತ್ತೆಯಾಗಿವೆ.

ಹಳ್ಳಿಯಲ್ಲಿ ನಮ್ಮ ಅಜ್ಜಿ, ಅವ್ವ ಕೂಡ ಮಡಕೆಯಲ್ಲಿಯೇ ಆಡುಗೆ ಮಾಡುತ್ತಿದ್ದರು. ರಾಗಿ ಮುದ್ದೆ, ಸಾರು, ಕುಡಿಯುವ ನೀರು ಸಹ ಮಡಕೆಯದ್ದೇ ಆಗಿತ್ತು. ಬೆಂಗಳೂರಿಗೆ ಬಂದು ಊಟ, ನೀರು ಎಲ್ಲವೂ ಸ್ಟೀಲ್, ಪ್ಲಾಸ್ಟಿಕ್ ಮಯವಾಗಿವೆ. ಆದರೆ ಮಡಕೆಯಲ್ಲಿನ ರುಚಿಯೇ ಬೇರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net