ಬೆಳಗಾವಿ: ಚನ್ನಮ್ಮನ ಕಿತ್ತೂರು ಖೋದಾನಪುರ ಗ್ರಾಮದ ಬಳಿಯ ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಹೆಸರಿನಲ್ಲಿ ನಡೆಸುತ್ತಿರುವ ಬಾರ್ ಬಂದ್ ಮಾಡಲು ಆಗ್ರಹಿಸಿ ಖೋದಾನಪುರ ಗ್ರಾಮಸ್ಥರು ಸೋಮವಾರ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.
ಕರ್ನಾಟಕ ಬಹುಜನ ಚಳವಳಿ ಸಂದ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಏಳು ದಿನಗಳೊಳಗೆ ಬಂದ್ ಮಾಡಿದಿದ್ದರೆ ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಬಾರ್ ಎದುರೇ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಯುವಕರು ಅತಿಯಾದ ಮದ್ಯ ಸೇವಿಸಿ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಜೀವನ ಕಳೆದುಕೊಂಡಿದ್ದು, ಸಾಕಷ್ಟು ಮನೆತನಗಳು ಹಾಳಾಗಿವೆ. ಬಾರ್ ಇರುವ ಮಾರ್ಗದಲ್ಲಿ ನಡೆದುಕೊಂಡು ಬರುವ ಹೆಣ್ಣು ಮಕ್ಕಳು, ಶಾಲಾ ವಿದ್ಯಾರ್ಥಿನಿಯರಿಗೆ, ಜಮೀನುಗಳಿಗೆ ಹೋಗಿ ಬರುವ ಮಹಿಳೆಯರಿಗೂ ಕುಡುಕರು ಹಿಂಸೆ ನೀಡುತ್ತಿದ್ದಾರೆ. ಸುತ್ತಲಿನ ಜಮೀನುಗಳಲ್ಲಿ ಮದ್ಯದ ಬಾಟಲಿಗಳನ್ನು ಎಸೆಯುತ್ತಿದ್ದು, ಉಳುಮೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಬಾರ್ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಬಾರ್ ಬಂದ್ ಮಾಡಲು ಆಗ್ರಹಿಸಿ ಖೋದಾನಪುರ ಗ್ರಾಮಸ್ಥರು ಚನ್ನಮ್ಮನ ಕಿತ್ತೂರಿನಲ್ಲಿ ತಹಸೀಲ್ದಾರ್ ಕಲಗೌಡ ಪಾಟೀಲಗೆ ಸೋಮವಾರ ಮನವಿ ಸಲ್ಲಿಸಿದರು. ಕರವೇ ಅಧ್ಯಕ್ಷ ಕಿರಣ ವಾಳದ, ಮಹಾಂತೇಶ ಗೌಡರ, ಹನುಮಂತ ಕಿವಡಿ, ಕೀರ ಉಡಕೇರಿ, ಕಲ್ಲಪ್ಪ ಕಿವಡಿ, ರಮೇಶ ಮಡಿವಾಳರ, ಶಂಕರ ಚಚಡಿ ಹಾಗೂ ಮಹಿಳೆಯರು ಇದ್ದರು.