ಒಳ ಮೀಸಲಾತಿಗೆ ಒತ್ತಾಯಿಸಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಬಳಿ ಮಾದರ ಸಭಾದಿಂದ ಪ್ರತಿಭಟನೆ ಮಾಡಲಾಯಿತು. ಮಾದರ ಮಾಹಾಸಭೆ ಜಿಲ್ಲಾಧ್ಯಕ್ಷ ಎಚ್.ಎಂ.ಸುಬ್ಬರಾಜು, ಉಪಾಧ್ಯಕ್ಷ ವಿ.ನಾರಾಯಣಸ್ವಾಮಿ, ಖಂಜಾಜಿ ಎಂ.ವೆಂಕಟೇಶ್, ತೂಬಗೆರೆ ಹೋಬಳಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಲಘುಮೇನಹಳ್ಳಿ ಮಂಜುನಾಥ್ ಇದ್ದರು.
ದೊಡ್ಡಬಳ್ಳಾಪುರ : ಒಳ ಮೀಸಲಾತಿ ಜಾರಿ ಮಾಡದೆ ಹಿಂದೇಟು ಹಾಕುತ್ತಿರುವ ಸರ್ಕಾರದ ನಡೆ ಖಂಡಿಸಿ ಮತ್ತು ಶೀಘ್ರ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದರ ಸಭಾದ ಜಿಲ್ಲಾ ಘಟಕದಿಂದ ದೊಡ್ಡಬಳ್ಳಾಪುರ ತಹಸೀಲ್ದಾರ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮಾದರ ಸಭಾ ಜಿಲ್ಲಾ ಘಟಕ ಅಧ್ಯಕ್ಷ ಸುಬ್ಬರಾಜು ಮಾತನಾಡಿ, ಒಳ ಮೀಸಲಾತಿಗೆ ಆಗ್ರಹಿಸಿ ಮಾದಿಗ ಸಮುದಾಯ 35 ವರ್ಷಗಳ ಸುದೀರ್ಘ ಹೋರಾಟ ಮಾಡಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾರಿಗೆ ಬಂದಿದೆ. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ಅಳವಡಿಸದೆ 56,342 ಖಾಲಿ ಹುದ್ದೆ ತುಂಬಲು ನೋಟಿಫಿಕೇಷನ್ ಹೊರಡಿಸಿರುವುದು ದುರಂತ. ಕೆಲಸದಲ್ಲಿ ಶೇ. 15ರ ಹಂಚಿಕೆಯನ್ನು ಸ್ಪಷ್ಟ್ಟವಾಗಿ ಅನ್ವಯಿಸಿ ಕ್ರಮ ಕೈಗೊಳ್ಳಬೇಕು. ಪರಿಷತ ರೋಸ್ಟರ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾದರ ಮಹಾಸಭಾದ ಕಾರ್ಯದರ್ಶಿ ಬಚ್ಚಹಳ್ಳಿ ನಾಗರಾಜು ಮಾತನಾಡಿ, ಸುದೀರ್ಘವಾದ ಹೋರಾಟ ಇದ್ದರೂ ನಮ್ಮನ್ನಾಳಿದ ಮೂರು ಪಕ್ಷಗಳು, ಸರ್ಕಾರಗಳು ನಮ್ಮ ನೋವಿಗೆ ಧ್ವನಿಯಾಗಲಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯವು ಒಳ ಮೀಸಲಾತಿ ಜಾರಿಮಾಡಿದೆ. ಒಳ ಮೀಸಲಾತಿಗೆ ರಾಜ್ಯಪಾಲರ ಅಂಕಿತ ಸಿಕ್ಕಿದೆ, ಆದೇಶವನ್ನು ಕತ್ತಲಲ್ಲಿಟ್ಟ ಸರ್ಕಾರ ಒಳ ಮೀಸಲಾತಿ ಅಳವಡಿಸಿ 56,342 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. 2012ರ ಮೀಸಲಾತಿಯಂತೆ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರ ಅಧಿಸೂಚನೆ ಹಿಂಪಡೆದು ಹೊಸ ಅಧಿಸೂಚನೆ ಹೊರಡಿಸಬೇಕು. ಒಳ ಮೀಸಲಾತಿಯಡಿ ಖಾಲಿ ಹುದ್ದೆಗಳು ಭರ್ತಿಯಾಗಬೇಕು. ಮಾ.12ರಂದು ಫ್ರೀಡಂಪಾರ್ಕ್ನಲ್ಲಿ ಐಕ್ಯ ಹೋರಾಟ ಪ್ರಾರಂಭವಾಗಲಿದೆ. ಒಳ ಮೀಸಲಾತಿ ಪಡೆಯುವರೆಗೂ ಯಾರು ಮನೆಗೆ ಹೋಗುವುದಿಲ್ಲ ಎಂದರು.
ಸಮುದಾಯದ ಮುಖಂಡರಾದ ಹನುಮಯ್ಯ, ದೊಡ್ಡತುಮಕೂರು ವೆಂಕಟೇಶ್, ರಾಮಕೃಷ್ಣಪ್ಪ, ಟಿ.ಡಿ.ಮುನಿಯಪ್ಪ, ತಳವಾರ ನಾಗರಾಜು, ಹರ್ಷ, ಕಾಂತರಾಜು, ಕನ್ನಡ ವೆಂಕಟೇಶ್, ಮಾಡೇಶ್ವರ ನರೇಂದ್ರ, ಗಂಗರಾಜು ಇದ್ದರು.