ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆಗಾಗಿ ಆಗ್ರಹ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಸುನಂದ ನಾಯಕ, ಭಾರತಿ ವಾಲಿ, ಅಶ್ವಿನಿ ತಳವಾರ ಮತ್ತಿತರರಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಸುನಂದ ನಾಯಕ, ಭಾರತಿ ವಾಲಿ, ಅಶ್ವಿನಿ ತಳವಾರ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಜಿಲ್ಲಾಧ್ಯಕ್ಷೆ ಸುನಂದ ನಾಯಕ ಆಕ್ರೋಶ
  • ಎಡಿಸಿ ಡಾ. ಔದ್ರಾಮಗೆ ಮನವಿ
ವಿಜಯಪುರ: ಕೇಂದ್ರ ಸರ್ಕಾರ ಐಸಿಡಿಎಸ್‌ಗೆ ನೀಡುತಿದ್ದ ಅನುದಾನವನ್ನು ಬೆಲೆಯೇರಿಕೆಗೆ ತಕ್ಕ ಹಾಗೆ ಹೆಚ್ಚಳ ಮಾಡದೇ ನಿರಂತರವಾಗಿ ಕಡಿಮೆ ಮಾಡುತ್ತಿರುವುದು ಮತ್ತು 2017ರಿಂದ ಪೌಷ್ಟಿಕ ಆಹಾರಕ್ಕೆ ನೀಡಬೇಕಾದ ಘಟಕ ವೆಚ್ಚ ಹೆಚ್ಚಳ ಮಾಡದೇ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಸುನಂದ ನಾಯಕ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಜಾರಿ ಮಾಡಿದ್ದರಿಂದ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲಾಗುತ್ತಿದೆ. ಅದರಿಂದ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತೆಗೆಯುವುದಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹೇಳಿದ ರಾಜ್ಯ ಸರ್ಕಾರವೂ ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.
ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರ ಸ್ಥಳೀಯ ತಾಜಾ ಆಹಾರದ ಬದಲಿಗೆ ಸಂಸ್ಕರಿಸಿದ ಪ್ಯಾಕೇಟ್ ಆಹಾರ, ನಗದು ವರ್ಗಾವಣೆ, ಕೇಂದ್ರಿಕೃತ ಕಾರ್ಪೋರೇಟ್ ಅಡಿಗೆ ಮನೆಗಳು ಹಾಗೂ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಹೆಸರಲ್ಲಿ ಕೂಸಿನ ಮನೆಗಳ ಮೂಲಕ ಐಸಿಡಿಎಸ್ ಖಾಸಗೀಕರಣ ಮಾಡಲು ಮುಂದಾಗಿದೆ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಎಫ್‌ಆರ್‌ಎಸ್, ಇ-ಕೆವೈಸಿ, ಪೋಷಣ ಟ್ರಾೃಕರ್, ಆನ್‌ಲೈನ್ ಕೆಲಸಗಳಿಗೆ ಗುಣಮಟ್ಟದ ಮೊಬೈಲ್, 5ಜಿ ಡಾಟಾ ಕೇಂದ್ರಗಳಿಗೆ ವೈಫೈ ನೀಡದೇ ನೀಡದೇ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ಅಲ್ದೆ, ಜನಗಣತಿ ಬಿಎಲ್‌ಒ ಕೆಲಸಗಳು ಸೇರಿ ಹೆಚ್ಚ್ಚುವರಿ ಕೆಲಸದ ಒತ್ತಡ ಹೇರಲಾಗುತ್ತಿರುವ ಕ್ರಮ ಖಂಡನಾರ್ಹ ಎಂದರು.
ಗೌರವ ಅಧ್ಯಕ್ಷೆ ಭಾರತಿ ವಾಲಿ ಮಾತನಾಡಿ, 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕನಿಷ್ಠ ಕೂಲಿ ಜಾರಿ ಮಾಡಲಿಲ್ಲ. ರಾಜ್ಯ ಸರ್ಕಾರವಾದರೂ ಚುನಾವಣೆ ಸಂದರ್ಭದಲ್ಲಿ ನೀಡದ ಭರವಸೆವಂತೆ ಕಾರ್ಯಕರ್ತೆರಿಗೆ 15,000 ರೂ., ಸಹಾಯಕಿಗೆ 10,000 ವೇತನ ಹೆಚ್ಚಳಮಾಡಬೇಕು ಎಂಬುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ, ಸರಸ್ವತಿ ಮಠ ಮಾತನಾಡಿದರು. ಸಂಘದ ಖಜಾಂಚಿ ಪ್ರತಿಭಾ ಕುರಡೆ, ಸರಸ್ವತಿ ಮಠ, ಶೋಭಾ ಕೊಡತೆ, ಸುವರ್ಣ ಹಲಗಣಿ, ಗಿರಿಜಾ ಸಕ್ರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net