ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯದ ಅಧಿಕಾರಿಗಳು ದೀಪಕ್ ಕೇಬಲ್ ಲಿಮಿಟೆಡ್ಸ್ ಸಂಸ್ಥೆಯ ಮೇಲೆ ದಾಳಿ ನಡೆಸಿ 150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸ್ಥಿರಾಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.
ದೀಪಕ್ ಕೇಬಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ ರಾವ್ ಮತ್ತು ನಿರ್ದೇಶಕಿ ಸತ್ಯಾವತಿ ಬಾಲ್ ಹಾಗೂ ಸಹವರ್ತಿ ಸಂಸ್ಥೆಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಜೂ.2ರಂದು ದಾಳಿ ನಡೆಸಿ ಡಿಜಿಟಲ್ ಸಾಧನಗಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಸಿಬಿಐ ಬೆಂಗಳೂರು ಘಟಕ ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ತನಿಖೆಯನ್ನು ಆರಂಭಿಸಿತ್ತು. ತನಿಖೆ ವೇಳೆ ಕಂಪನಿಯು ಬ್ಯಾಂಕ್‌ಗಳಿಂದ ಪಡೆದ ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳಲು ನಕಲಿ ಬಿಲ್‌ಗಳು, ಊಹಾಪೋಹದ ಸ್ಟಾಕ್ ಸ್ಟೇಟ್‌ಮೆಂಟ್ ಸಲ್ಲಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖೆಯ ಭಾಗವಾಗಿ ಜೂ.2 ಕೆ. ವೆಂಕಟೇಶ್ವರ ರಾವ್ ಅವರನ್ನು ಪಿಎಂಎಲ್ಎ ಕಾಯ್ದೆಯಡಿ ಬಂಧಿಸಿ ಇ.ಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ವೇಳೆ ಅಪರಾಧದಿಂದ ಗಳಿಸಿದ ಆದಾಯವನ್ನು ಮರೆಮಾಚಲು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಡೆಯಲು ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಅಂಗ ಸಂಸ್ಥೆಗಳಿಗೆ ಅಕ್ರಮ ಹಣ ವರ್ಗಾವಣೆ
ಸಾಲದ ಹಣವನ್ನು ಸರಿಯಾದ ಉದ್ದೇಶಕ್ಕೆ ಬಳಸಿಕೊಳ್ಳದ ದೀಪಕ್ ಕೇಬಲ್ ಕಂಪನಿಯು ತನ್ನ ವಿವಿಧ ಅಂಗಸಂಸ್ಥೆಗಳಾದ ಎಂ.ಎಸ್ ಸೂರ್ಯ ಟ್ರಾನ್ಸ್‌ಮಿಷನ್ ಲಿಮಿಟೆಡ್, ಎಂ.ಎಸ್ ಆಧುನಿಕ್ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್, ಎಂ.ಎಸ್ ದಾಂಡೇಲಿ ಫೆರೋ ಪ್ರೈವೇಟ್ ಲಿಮಿಟೆಡ್ ಸೇರಿ ಹಲವು ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.