ಜುಲೈ ಅಂತ್ಯದೊಳಗೆ ತಂಬಾಕು ಮುಕ್ತ ಗ್ರಾಮ ಘೋಷಿಸಿ : ರಾಯಪ್ಪ ಹುಣಸಗಿ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ ಸಭೆ
ಕಲಬುರಗಿ : ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬರುವ ಜುಲೈ ಮಾಹೆಯ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ಒಂದು ಗ್ರಾಮವನ್ನಾದರು ತಂಬಾಕು ಮುಕ್ತ ಗ್ರಾಮವನ್ನಾಗಿಸಿ ಘೋಷಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಸೂಚನೆ ನೀಡದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದಕ್ಕೆ ಪೂರಕವಾಗಿ ಜೂನ್ ಅಂತ್ಯದೊಳಗೆ ಜಿಲ್ಲೆಯ 261 ಗ್ರಾಮ ಪಂಚಾಯತಿಯಲ್ಲಿ ಗ್ರಾಮ ತಂಬಾಕು ನಿಯಂತ್ರಣ ಸಮಿತಿ ರಚಿಸಿಕೊಂಡು ಗ್ರಾಮ ಸಭೆಯಲ್ಲಿ ತಂಬಾಕು ಮುಕ್ತ ಗ್ರಾಮ ಕುರಿತು ಚರ್ಚಿಸಬೇಕು ಎಂದರು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಕುರಿತು ಗ್ರಾಮ ಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕು. ವಿಶೇಷವಾಗಿ ಸ್ಥಳಿಯವಾಗಿ ತಂಬಾಕು ಸೇವನೆ ಮಾಡದ ಯಾವುದೇ ಪ್ರಮುಖ ಸಾರ್ವಜನಿಕ ವ್ಯಕ್ತಿ ಅಥವಾ ಧಾರ್ಮಿಕ ಮುಖಂಡರನ್ನು ರಾಯಭಾರಿಯಾಗಿ ಆಯ್ಕೆ ಮಾಡಿ ಅವರ ಮುಖಾಂತರ ಹಳ್ಳಿಯಲ್ಲಿ ತಂಬಾಕು ತ್ಯಜಿಸುವ ಜಾಗೃತಿ ಕಾರ್ಯ ಮಾಡಬೇಕು ಎಂದರು.
ಜಿಲ್ಲೆಯ ಒಟ್ಟು 3,883 ಶಾಲೆಗಳ ಪೈಕಿ 927 ಮತ್ತು 285 ಪದವಿ ಪೂರ್ವ ಕಾಲೇಜುಗಳ ಪೈಕಿ 79 ಕಾಲೇಜುಗಳಲ್ಲಿ ತಂಬಾಕು ಮುಕ್ತ ಶಾಲೆ-ಕಾಲೇಜು ಎಂದು ಘೋಷಿಸಿಕೊಳ್ಳಲಾಗಿದೆ. ಇನ್ನುಳಿದ ಶಾಲಾ ಕಾಲೇಜುಗಳಲ್ಲಿ ಜೂನ್ 25 ರೊಳಗೆ ತಂಬಾಕು ಮುಕ್ತ ಪ್ರದೇಶವೆಂದು ಘೋಷಿಸಿ ವರದಿ ಸಲ್ಲಿಸಬೇಕು ಎಂದು ಡಿ.ಡಿ.ಪಿ.ಐ ಮತ್ತು ಡಿ.ಡಿ.ಪಿ.ಯು ಅವರಿಗೆ ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಪ್ರಕಾರ ಶಾಲಾ-ಕಾಲೇಜು ಸುತ್ತ 100 ಮೀಟರ್ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡುವಂತಿಲ್ಲ. ಹೀಗಾಗಿ ಸ್ಥಳೀಯವಾಗಿ ಅಧಿಕಾರಿಗಳು ತಂಬಾಕು ಮಾರಾಟವಾಗದಂತೆ ಎಚ್ಚರ ವಹಿಸಬೇಕು. ಕಲಬುರಗಿ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಲೈಸೆನ್ಸ್ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದ್ದು, ಇದು ನಿಯಮಬಾಹಿರವಾಗಿದೆ. ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ಲೈಸೆನ್ಸ್ ನೀಡಬೇಕು ಮತ್ತು ಮಾರಾಟ, ಸಂಗ್ರಹಣೆ ಕುರಿತು ತಿಳಿಹೇಳಬೇಕು. ತಂಬಾಕು ಉತ್ಪನ್ನಗಳು ತಿನಿಸಿ, ಆಹಾರ ಪದಾರ್ಥಗಳೊಂದಿಗೆ ಇಡುವಂತಿಲ್ಲ. ಒಂದು ವೇಳೆ ಕೋಟ್ಪಾ ಕಾಯ್ದೆ-2003 ಉಲ್ಲಂಘಿಟಿ ಮಾರಾಟ ಮಾಡಿದಲ್ಲಿ ಅಂತಹ ಅಂಗಡಿಗಳ ಮೇಲೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಜೂನ್ 2ಕ್ಕೆ ವಿಶ್ವ ತಂಬಾಕು ದಿನಾಚರಣೆ:
ಬರುವ ಜೂನ್ 2 ರಂದು ವಿಶ್ವ ತಂಬಾಕು ದಿನಾಚರಣೆ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೇ, ಜಾಗೃತಿ ಜಾಥಾ, ಆರೋಗ್ಯ ತಪಾಸಣಾ ಶಿಬಿರ, ತಂಬಾಕು ಉತ್ಪನ್ನಗಳ ಸೇವೆನಯಿಂದಾಗುವ ದುಷ್ಟರಿಣಾಮಗಳ ಕುರಿತು ವಿದ್ಯಾರ್ಥಿಗಳಿಂದ ಮೈಮ್ ಸ್ಕಿಟ್ ಪ್ರದರ್ಶನ ಹೀಗೆ ನಾನಾ ಚಟುವಟಿಕೆಗಳನ್ನು ಆಯೋಜಿಸುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಗೆ ರಾಯಪ್ಪ ಹುಣಸಗಿ ನಿರ್ದೇಶನ ನೀಡಿದರು.
ತಂಬಾಕು ನಿಯಂತ್ರಣ ಕಾಯ್ದೆಯನ್ವಯ ಇನ್ಮುಂದೆ ನಿಯಮ ಉಲ್ಲಂಘಿಸುವವರಿಗೆ ಕನಿಷ್ಠ 1,000 ರೂ. ವರೆಗೆ ದಂಡ ವಿಧಿಸಬೇಕು. ಜೂನ್ 4 ರಂದು ಜಿಲ್ಲೆಯಾದ್ಯಂತ ವಿಶೇಷ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಆರೋಗ್ಯ ಇಲಾಕೆಯ ಅಧಿಕಾರಿಗಳಿಗೆ ಎ.ಡಿ.ಸಿ. ಸೂಚಿಸಿದರು.
ವಿಭಾಗೀಯ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಜಾತಾ ಪಾಟೀಲ ಅವರು ಕಳೆದ 4-5 ವರ್ಷದಲ್ಲಿ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಅನುಷ್ಠಾನ, ಜಂಟಿ ಕಾರ್ಯಚರಣೆ ನಡೆಸಿ ಅಂಗಡಿಗಳ ಮೇಲೆ ಮಾಡಿದ ದಾಳಿ, ಸಂಗ್ರಹಿಸಿದ ದಂಡ, ತಂಬಾಕು ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಮಾಹಿತಿ ನೀಡಿದರು. ಕಳೆದ 2024-25 ಮತ್ತು 2025-26ನೇ ಸಾಲಿನಲ್ಲಿ ನಿಗಧಿತ ಗುರಿಕ್ಕಿಂತ ಹೆಚ್ಚಿನ ದಾಳಿ ಮಾಡಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ವಿಧಿಸಿರುವ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ಕೆ ಇದೇ‌ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಡಿ.ಎಚ್.ಓ. ಡಾ.ಶರಣಸಬಪ್ಪ ಕ್ಯಾತನಾಳ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಕೇಶ್ ಕಾಂಬ್ಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ್, ಕಲಬುರಗಿ ಟಿ.ಎಚ್.ಓ ಡಾ. ಮಾರುತಿ ಕಾಂಬ್ಳೆ, ಅಫಜಲಪೂರ ಟಿ.ಎಚ್.ಓ ಡಾ ಚೇತನ್ ದುಮಾಲೆ, ಸೋಶಿಯಲ್ ವರ್ಕರ್ ಆರತಿ ಧನಶ್ರೀ, ಜಿಲ್ಲಾ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಡಿ.ಇ.ಓ. ರವಿಕುಮಾರ್ ಪೂಜಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net