ಕಸ್ತೂರಿ ರಂಗನ್​ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭರವಸೆ

ಕಸ್ತೂರಿ ರಂಗನ್​ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭರವಸೆ
ಕಸ್ತೂರಿ ರಂಗನ್​ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭರವಸೆ
Published on
ಉಡುಪಿ: ಕಸ್ತೂರಿ ರಂಗನ್​ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ಕುರಿತು ಜನರ ಕಳವಳ ಅರ್ಥವಾಗಿದೆ. ಸೆ.27ರೊಳಗೆ ಸರ್ಕಾರ ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ಕಾಲಾವಕಾಶವಿದೆ. ಈ ನಿಟ್ಟಿನಲ್ಲಿ ವರದಿ ಬಗ್ಗೆ ಚರ್ಚಿಸಲು ಸೋಮವಾರದಿಂದ ವಿಶೇಷ ಅಧಿವೇಶನ ನಡೆಯಲಿದ್ದು, ಎಲ್ಲರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು. ವರದಿಯ ಸಾಧಕ & ಬಾಧಕಗಳ ಕುರಿತು ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂವಾದದಲ್ಲಿ ಮಾತನಾಡಿದರು.
ವರದಿ ವಿಷಯದಲ್ಲಿ ತನ್ನ ಅಥವಾ ಶಾಸಕರ ಅಭಿಪ್ರಾಯ ಮುಖ್ಯವಲ್ಲ. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಸಾರ್ವಜನಿಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಸೂಕ್ಷ್ಮ ವಿಷಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು. ಸೋಮವಾರ ಎಲ್ಲ ಶಾಸಕರಿಗೂ ಈ ಕುರಿತು ಮುಕ್ತವಾಗಿ ಮಾತನಾಡಲು ಕಾಲಾವಕಾಶ ನೀಡಲಾಗುವುದು. ಜನಪ್ರತಿನಿಧಿಗಳು ಮತ್ತು ಮುಖಂಡರು, ನಾಯಕರು ನೀಡಿರುವ ತಜ್ಞರ ಸಮಿತಿ ರಚನೆ, ಕೇರಳ ಮಾದರಿ ಪರಿಶೀಲನೆ ಹಾಗೂ ಪ್ರತ್ಯೇಕ ಸರ್ವೇ ನಡೆಸುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು.
ಮಂಗಳೂರು, ಹಾಸನ, ಸಕಲೇಶಪುರ, ಶಿವಮೊಗ್ಗ ಹಾಗೂ ಶೃಂಗೇರಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ. ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಪ್ರಸ್ತುತ ಕೆಲವರಿಗೆ 25 ವರ್ಷ ಹಾಗೂ ಇನ್ನೂ ಕೆಲವರಿಗೆ 75 ವರ್ಷಗಳ ನಿಯಮವಿದೆ. ಇದನ್ನು ಎಲ್ಲರಿಗೂ ಸಮಾನವಾಗಿ 25 ವರ್ಷಕ್ಕೆ ಸಡಿಲಗೊಳಿಸುವಂತೆ ಅಸೆಂಬ್ಲಿಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ 60 ತೀರ್ಮಾನ ಮಾಡಿದ್ದು, ಅದರಲ್ಲಿ 40 ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿವೆ ಎಂದು ಸಿಎಂ ಹೇಳಿದರು.
ಸೋಮೇಶ್ವರ, ಕುದುರೆಮುಖ ಹಾಗೂ ಮೂಕಾಂಬಿಕಾ ಅಭಯಾರಣ್ಯ ಪ್ರದೇಶಗಳಿಂದ ಹೊರಬಂದ ಜನರಿಗೆ ಕಳೆದ ನಾಲ್ಕು ವರ್ಷಗಳಿಂದ ಪುನರ್ವಸತಿ ಹಣ ಬಿಡುಗಡೆಯಾಗಿಲ್ಲ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಸರ್ಕಾರ ಅನುದಾನ ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಶಾಸಕ ಸುನೀಲ್​ ಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಮಲೆಕುಡಿಯ ಸಮುದಾಯ ಸಂಘದ ರಾಜ್ಯಧ್ಯಕ್ಷ ಶ್ರೀಧರ್​ಗೌಡ, ಉಡುಪಿ ರೈತ ಸಂಘದ ಉದಯ ಕುಮಾರ್​ ವಂಡ್ಸೆ, ಹೆಬ್ರಿ ಗ್ರಾಪಂ ಮಾಜಿ ಅಧ್ಯಕ್ಷ ನವೀನ್​ ಅಡ್ಯಂತಾಯ, ನಾಡ್ಪಾಲ್​ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್​ ಹೆಗಡೆ, ಉದ್ಯಮಿ ಮುನಿಯಾಲು ಉದಯ್​ ಕುಮಾರ್​ ಶೆಟ್ಟಿ ಮಾತನಾಡಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​, ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುರೇಶ್​ ಶೆಟ್ಟಿ ಗುರ್ಮೆ, ಯಶ್​ಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಕಿರಣ್​ ಕುಮಾರ್​ ಕೊಡ್ಗಿ, ವಿಪ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗೌಡ ಮತ್ತಿತರರು ಇದ್ದರು.

ಭೌತಿಕ ಸಮೀಕ್ಷೆಗೆ ಒತ್ತಾಯ

ಕೇರಳ ಮಾದರಿಯಂತೆ ರಾಜ್ಯದಲ್ಲಿ ಮಾಡಿದರೆ 5 ಸಾವಿರ ಚ.ಕಿ.ಮೀ. ಪ್ರದೇಶ ಮುಕ್ತವಾಗಲಿದೆ. ಹೀಗಾಗಿ ಭೌತಿಕ ಸಮೀಕ್ಷೆ ಮಾಡಿಸಬೇಕು. ನಂತರ ಆ ವರದಿಯನ್ನು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್​ ಹಾಗೂ ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂಬ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸಿದರು.

ಸರ್ವಜ್ಞನ ವಚನ ಉಲ್ಲೇಖ

"ನಿಂಬೆಗಿಂತ ಶ್ರೇಷ್ಠ ಹುಳಿಯಿಲ್ಲ, ದುಂಬಿಗಿಂತ ಕರಿ ಬಣ್ಣವಿಲ್ಲ. ಶಂಭುವಿಗಿಂತ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ' ಎಂಬ ಸರ್ವಜ್ಞನ ವಚನ ಉಲ್ಲೇಖಿಸಿದ ಸಿಎಂ ಡಿಕೆಶಿ, ನನಗೆ ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಲು ಬಂದಿರುವೆ. ನಮ್ಮ ರಾಜಕಾರಣ ಭಾವನೆಗಳ ಮೇಲಲ್ಲ, ಬದುಕಿನ ಮೇಲೆ ಎಂದು ಪ್ರತಿಪಾದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net