ಗಂಗಾವತಿ ಬಿಡಲ್ಲ, ಬಳ್ಳಾರಿಯಲ್ಲಿ ಪತ್ನಿ ಸ್ಪರ್ಧೆ ಡಿಲಿಮಿಟೇಷನ್ ಮೇಲೆ ನಿರ್ಧಾರ: Janardhana Reddy

 Janardhana Reddy
Janardhana Reddy
Published on
ಬಳ್ಳಾರಿ: ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ( Janardhana Reddy) ಅವರು ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕೀಯ ಹಾಗೂ ತಮ್ಮ ಮುಂದಿನ ಚುನಾವಣಾ ಸ್ಪರ್ಧೆಯ ಕುರಿತು ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಪ್ರಕ್ರಿಯೆ ನಡೆಯುವ ಸಾಧ್ಯತೆ ಇದ್ದು, ಟಿಎಂಸಿ ಸಂಸದರ ಬೆಂಬಲದ ಬಳಿಕ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಇಂಡಿಯಾ ಒಕ್ಕೂಟದಿಂದ ಹೊರಬಂದು ಇನ್ನೂ ಹಲವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಂಗಾವತಿ ಬಿಡಲ್ಲ, ಪತ್ನಿ ಸ್ಪರ್ಧೆ ಬಗ್ಗೆ ರೆಡ್ಡಿ ಹೇಳಿದ್ದೇನು?

ನನ್ನ ಸ್ಪರ್ಧೆ ಗಂಗಾವತಿಯಲ್ಲೇ: "ನಾನು ಮುಂದಿನ ಬಾರಿಯೂ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ, ಗಂಗಾವತಿ ಬಿಡುವ ಪ್ರಶ್ನೆಯೇ ಇಲ್ಲ. ಆದರೆ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಅಂತಿಮವಾಗಿ ಪಕ್ಷವೇ ತೀರ್ಮಾನ ಮಾಡುತ್ತದೆ" ಎಂದರು.
ಬಳ್ಳಾರಿಯಲ್ಲಿ ಪತ್ನಿ ಸ್ಪರ್ಧೆ: "ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಯಾಗುವುದನ್ನು ನೋಡಿಕೊಂಡು ಬಳ್ಳಾರಿ ನಗರ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಲಕ್ಷ್ಮಿ ಅರುಣಾ ಮತ್ತು ನನ್ನ ಸಹೋದರ ಸೋಮಶೇಖರ್ ರೆಡ್ಡಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ" ಎಂದು ಗೊಂದಲಗಳಿಗೆ ತೆರೆ ಎಳೆದರು.

ಮೋದಿ ಜಗತ್ತು ಮೆಚ್ಚಿದ ನಾಯಕ

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ರೆಡ್ಡಿ, "ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದೇಶದ ಮಕ್ಕಳಿಗೆ ಕೇವಲ ಚಾಕಲೇಟ್ ಕೊಡಲು ಮಾತ್ರ ಲಾಯಕ್ಕು. ಆದರೆ ನರೇಂದ್ರ ಮೋದಿ ಅವರು ಜಗತ್ತೇ ಮೆಚ್ಚಿದ ನಾಯಕ. ಕೆಲ ಜೋಕರ್‌ಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದರು. ಇನ್ನು ದೇಶದಲ್ಲಿ ಬೆಲೆ ಏರಿಕೆಗೆ ಜಾಗತಿಕ ಯುದ್ಧಗಳೇ ಕಾರಣ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ಸಮರ್ಥಿಸಿಕೊಂಡರು.

ಕೇಸ್‌ಗಳಿಂದ ಖುಲಾಸೆ, ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೇ ವೋಟ್

ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಮಾತನಾಡಿದ ಅವರು, "ನನ್ನ ಮೇಲಿದ್ದ ಬಹುತೇಕ ಪ್ರಕರಣಗಳಲ್ಲಿ ನಾನು ಖುಲಾಸೆಯಾಗಿದ್ದೇನೆ (ದೋಷಮುಕ್ತ). ಇನ್ನು ಕೇವಲ ಒಂದೆರಡು ಕೇಸ್‌ಗಳು ಮಾತ್ರ ಬಾಕಿ ಇವೆ" ಎಂದರು.
ನನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಈಗಾಗಲೇ ಬಿಜೆಪಿಯಲ್ಲಿ ವಿಲೀನವಾಗಿದೆ. ಹೀಗಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೇ ಮತ ಹಾಕುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ, ಡಿಕೆ ಶಿವಕುಮಾರ್ ಅವರು ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸಿದ ರೆಡ್ಡಿ, ಆದರೆ ಸರ್ಕಾರದಲ್ಲಿರುವ ಗೊಂದಲಗಳನ್ನು ಅವರು ಹೇಗೆ ನಿವಾರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net