ಕನಕಪುರ ವೈದ್ಯಕೀಯ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಸದಿರಲು ನಿರ್ಧಾರ

ಕನಕಪುರ ವೈದ್ಯಕೀಯ ಕಾಲೇಜು
ಕನಕಪುರ ವೈದ್ಯಕೀಯ ಕಾಲೇಜು
Published on

ಪ್ರಮುಖ ಮುಖ್ಯಾಂಶಗಳು

  • 2026-27ನೇ ಶೈಕ್ಷಣಿಕ ವರ್ಷಕ್ಕೂ ಹೊಸ ವೈದ್ಯಕೀಯ ಕಾಲೇಜು ಲಭ್ಯವಾಗುವುದು ಅನುಮಾನ ಎಂದ ವೈದ್ಯಕೀಯ ಶಿಕ್ಷಣ ಇಲಾಖೆ
  • ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ. ಬಹಳ ಮುಖ್ಯವಾಗಿ ಕಾಲೇಜು ಆರಂಭಿಸಲು ಬೇಕಾದ ಮೂಲಸೌಕರ್ಯ ಸಿದ್ಧವಾಗಿಲ್ಲ.
  • ಮೂಲಸೌಕರ್ಯ ಕೊರತೆ ಕಾರಣದಿಂದ ಮತ್ತೊಮ್ಮೆ ಎನ್‌ಎಂಸಿ ಕಾಲೇಜು ಆರಂಭಿಸಲು ನಿರಾಕರಿಸಿದರೆ ಮುಜುಗರಕ್ಕೀಡಾಗುವ ಬದಲು ಪ್ರಸ್ತಾವನೆ ಸಲ್ಲಿಸದಿರುವುದು ಉತ್ತಮ ಎಂಬುದು ಇಲಾಖೆಯ ಅಭಿಪ್ರಾಯ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರವಾಗಿರುವ ಕನಕಪುರದಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕೂ ಹೊಸ ವೈದ್ಯಕೀಯ ಕಾಲೇಜು ಲಭ್ಯವಾಗುವುದು ಅನುಮಾನ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.
ಈ ಕಾರಣದಿಂದ ಮುಂದಿನ ವರ್ಷಕ್ಕೆ ರಾಜ್ಯಕ್ಕೆ ಲಭ್ಯವಾಗಲಿರುವ ವೈದ್ಯಕೀಯ ಸೀಟುಗಳಿಗಾಗಿ ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿಗೆ (ಎನ್‌ಎಂಸಿ) ಪ್ರಸ್ತಾವನೆ ಸಲ್ಲಿಸದಿರಲು ನಿರ್ಧರಿಸಿದೆ.
ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ. ಬಹಳ ಮುಖ್ಯವಾಗಿ ಕಾಲೇಜು ಆರಂಭಿಸಲು ಬೇಕಾದ ಮೂಲಸೌಕರ್ಯ ಸಿದ್ಧವಾಗಿಲ್ಲ. ಮೂಲಸೌಕರ್ಯ ಕೊರತೆ ಕಾರಣದಿಂದ ಮತ್ತೊಮ್ಮೆ ಎನ್‌ಎಂಸಿ ಕಾಲೇಜು ಆರಂಭಿಸಲು ನಿರಾಕರಿಸಿದರೆ ಮುಜುಗರಕ್ಕೀಡಾಗುವ ಬದಲು ಪ್ರಸ್ತಾವನೆ ಸಲ್ಲಿಸದಿರುವುದು ಉತ್ತಮ ಎಂಬುದು ಇಲಾಖೆಯ ಅಭಿಪ್ರಾಯವಾಗಿದೆ.
50 ಸೀಟುಗಳ ಕಾಲೇಜು ಆರಂಭಿಸಲು 220 ಹಾಸಿಗೆಯ ಆಸ್ಪತ್ರೆ ಇರಬೇಕು. ಇದೇ ಕಾರಣದಿಮದ ಆಸ್ಪತ್ರೆ ನಿರ್ಮಾಣಕ್ಕೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) 550 ಕೋಟಿ ರೂ. ಹಾಗೂ ಬಾಗಲಕೋಟೆ ವೈದ್ಯಕೀಯ ಕಾಲೇಜಿಗೆ 450 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ.
ಕಳೆದ ಮೂರು ವರ್ಷಗಳಿಂದ ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜು ಆರಂಭ ವಿಚಾರ ಚರ್ಚೆಯಾಗುತ್ತಿದೆ. ಆದರೆ, ರಾಮನಗರ ಕಾಲೇಜಿನ ಶೇ.50ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಕಾರ್ಯಗಳು ಮುಂದಿನ 6-7 ತಿಂಗಳಿನಲ್ಲಿ ಪೂರ್ಣವಾಗುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ 50 ಸೀಟು ಹೆಚ್ಚಳಕ್ಕೆ ಪ್ರಸ್ತಾವ

ಈ ವರ್ಷಕ್ಕೆ (2025-26) ಸಾಲಿಗೆ 450 ಸ್ನಾತಕ ಮತ್ತು 421 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಎನ್‌ಎಂಸಿ ಅನುಮತಿ ನೀಡಿತ್ತು. ಹೀಗಾಗಿ, ಉತ್ತಮ ಮೂಲಸೌಕರ್ಯವಿರುವ ಸರ್ಕಾರಿ ಕಾಲೇಜುಗಳು ಹೆಚ್ಚುವರಿ 50 ಸೀಟುಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಈ ವರ್ಷ ರಾಮನಗರ ಮತ್ತು ಬಾಗಲಕೋಟೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೋರಿ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net