ಎರಡು ವರ್ಷದ ಮಗು ಸಾವು, ಶಂಕೆ

death of two year old child
death of two year old child
Published on

ಪ್ರಮುಖ ಮುಖ್ಯಾಂಶಗಳು

  • ತಾಯಿ ವಿರುದ್ಧ ದೂರು ದಾಖಲು
ಬೆಂಗಳೂರು: ಸಹಜೀವನ ನಡೆಸುತ್ತಿದ್ದ ದಂಪತಿಗೆ ಜನಿಸಿದ್ದ ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಾರ್ಲೆಟ್ ಡೈಸಿ ಮೃತ ಮಗು. ತಂದೆ ಅಂಥೋನಿ, ತಾಯಿ ರೋಸ್ಲಿನ್ ದಂಪತಿಗೆ ಜನಿಸಿದ್ದ ಮಗು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಈ ಘಟನೆ ಜು.15ರಂದು ಇಂದಿರಾ ಸ್ಟ್ರೀಟ್‌ನಲ್ಲಿ ನಡೆದಿದೆ. ಮಗುವಿನ ಪೋಷಕರ ಕುಟುಂಬದ ಸ್ನೇಹಿತೆ ಸಮೃದ್ಧಿ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಮಗುವಿನಿ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 
ಮಗುವಿನ ತಂದೆ-ತಾಯಿ ಕೆಲವು ವರ್ಷಗಳಿಂದ ಇಂದಿರಾ ಸ್ಟ್ರೀಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದರು. ಇವರಿಗೆ ಹೆಣ್ಣು ಮಗು ಜನಿಸಿತ್ತು. ಮನೆಯಲ್ಲಿದ್ದಾಗ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಮಗುವನ್ನು ತಾಯಿ ರೋಸ್ಲಿನ್ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ, ಮಗು ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ಪೋಷಕರು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಘಟನೆಯ ನಂತರ ದಂಪತಿಯ ಸ್ನೇಹಿತೆ ಸಮೃದ್ಧಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ರೋಸ್ಲಿನ್ ಈ ಹಿಂದೆ ಹಲವು ಬಾರಿ ಮಗುವಿನ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂದು ಆರೋಪ ಮಾಡಿದ್ದಾರೆ. ಮೃತಪಟ್ಟ ಮಗುವಿನ ದೇಹದ ಮೇಲೆ ಹಲ್ಲೆ ನಡೆಸಿದ ಗಾಯದ ಗುರುತುಗಳಿರುವುದನ್ನು ಗಮನಿಸಿದ್ದು, ಇದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದ್ದಾರೆ.
ಮಗುವಿಗೆ ಉಸಿರಾಟದ ತೊಂದರೆಯಾದಾಗ ನನ್ನ ಪತಿಯ ಸ್ನೇಹಿತೆ (ಸಮೃದ್ಧಿ) ಸಹಾಯ ಮಾಡಲು ಬಂದಿದ್ದಳು. ಮಗುವಿಗೆ ಐದು ವರ್ಷ ತುಂಬುವ ಮುನ್ನ ವೆಂಟಿಲೇಷನ್ ಮಾಸ್ಕ್ ನೀಡಬಾರದು ಎಂದು ಹೇಳಿ, ಬಿಸಿ ನೀರಿಗೆ ವಿಕ್ಸೃ್ ಬೆರೆಸಿ ಆವಿಯನ್ನು ಹಿಡಿಸಲು ಮುಂದಾದಳು. ಮಗು ಭಯಗೊಂಡು ತನಗೆ ಆವಿ ಬೇಡವೆಂದು ಚೀರಿದಾಗ ಆಕೆ ಮಗುವನ್ನು ತಳ್ಳಿ ಹಲ್ಲೆ ನಡೆಸಿದಳು. ಮಗುವಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಇತ್ತ ನನ್ನ ಪತಿ ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದರು.
 ಹಣ ಇಲ್ಲವೆಂದು ನೆಪ ಹೇಳಿ ಅಲ್ಲಿಂದ ಹೊರಟು ಹೋದ ಹಾಗೂ ಮಗುವಿನ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ಮಾದಕ ವ್ಯಸನದ ಗೀಳು ಹೊಂದಿದ್ದ ಸಮೃದ್ಧಿಯ ವರ್ತನೆಯಿಂದ ಹೆದರಿದ ಮಗುವಿಗೆ ಆಘಾತವಾಯಿತು. ಪತಿ ಅಂಥೋನಿ ಮತ್ತು ಆತನ ಗೆಳತಿಯೇ ಮಗುವಿನ ಸಾವಿಗೆ ಕಾರಣ ಎಂದು ರೋಸ್ಲಿನ್ ಪ್ರತ್ಯಾರೋಪ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net