Death certificate: ಬದುಕಿದ ಮಹಿಳೆ ಹೆಸರಲ್ಲಿ ಮರಣ ಪ್ರಮಾಣಪತ್ರ ವಿತರಣೆ

 ಮರಣ ಪ್ರಮಾಣ ಪತ್ರದೊಂದಿಗೆ ಶಿವಗಂಗವ್ವ.
ಮರಣ ಪ್ರಮಾಣ ಪತ್ರದೊಂದಿಗೆ ಶಿವಗಂಗವ್ವ.
Published on
ಶಿಗ್ಗಾಂವ: ಮಹಿಳೆ ಜೀವಂತವಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿ ಮರಣ ಪ್ರಮಾಣ ಪತ್ರ ವಿತರಿಸಿದ ಘಟನೆ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬುವವರು ಅವರು ತಮ್ಮ ತಾಯಿ ಶಂಕ್ರವ್ವ (80)ಅವರ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಪಂ ಕಾರ್ಯದರ್ಶಿ ತಾಯಿಯ ಬದಲು ಶಿವಗಂಗವ್ವ ಅವರ ಹೆಸರನ್ನೇ ಮರಣ ಹೊಂದಿದವರ ಪಟ್ಟಿಯಲ್ಲಿ ಸೇರಿಸಿ ಪ್ರಮಾಣಪತ್ರ ವಿತರಿಸಿದ್ದಾರೆ.
ಅಧಿಕಾರಿ ತಪ್ಪಿನಿಂದ ಶಿವಗಂಗವ್ವ ಅವರ ಆಧಾರ ಕಾರ್ಡ್ ಅಮಾನ್ಯಗೊಂಡಿದ್ದು, ರೇಷನ್ ಕಾರ್ಡ್ ರದ್ದಾಗಿದೆ. ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಸಹಾಯ ಧನ ಸ್ಥಗಿತಗೊಂಡಿದೆ. ಅವರ ಪತಿಗೆ ಬರುತ್ತಿದ್ದ ಪಿಂಚಣಿಯೂ ನಿಂತು ಹೋಗಿದೆ.
ಬ್ಯಾಂಕ್‌ನಲ್ಲಿ ಹಣ ಪಡೆಯಲು ಹೋದಾಗ ಹೆಸರು ತಪ್ಪಾಗಿರುವುದು ಗೊತ್ತಾಗಿದೆ. ನಂತರ ತಿದ್ದುಪಡಿಗಾಗಿ ಕಚೇರಿಗಳಿಗೆ ಅಲೆ ದಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಾಪಂ ಇಒ ಮಂಜುನಾಥ ಸಾಳುಂಕೆ, 2025 ಮಾರ್ಚ್‌ನಲ್ಲಿ ಪ್ರಕರಣ ನಡೆದಿದೆ. ಕಾರಣ ಕೇಳಿ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಪ್ರಮಾಣ ಪತ್ರ ಸರಿಪಡಿಸಿದ್ದರೂ ಬದುಕಿರುವ ಮಗಳಿಗೆ ಸರ್ಕಾರದ ಸೌಲಭ್ಯ ನಿಂತು ಹೋಗಿದೆ. ನೋಟಿಸ್‌ಗೆ ಉತ್ತರ ಬಂದ ತಕ್ಷಣ ಪರಿಶೀಲಿಸಿ ವರದಿ ನೀಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net