ರೈತರ ಹೊಲಗಳಿಗೆ ಅಧಿಕಾರಿಗಳೊಂದಿಗೆ ಡಿಸಿ ಭೇಟಿ

ದೇವರಹಿಪ್ಪರಗಿ ಪಟ್ಟಣದ ಆವುಗೇಶ್ವರ ತಪೋಧಾಮ ಪರದೇಶಿಮಠದ ಹೊಲಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಡಿಡಿಎ ಚಂದ್ರಕಾಂತ ಪವಾರ, ಎಡಿಎ ಪ್ರಶಾಂತ ಸಾಣಿ, ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮತ್ತಿತರರಿದ್ದರು.
ದೇವರಹಿಪ್ಪರಗಿ ಪಟ್ಟಣದ ಆವುಗೇಶ್ವರ ತಪೋಧಾಮ ಪರದೇಶಿಮಠದ ಹೊಲಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಡಿಡಿಎ ಚಂದ್ರಕಾಂತ ಪವಾರ, ಎಡಿಎ ಪ್ರಶಾಂತ ಸಾಣಿ, ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನ್ನದಾತರ ಪರವಾಗಿ ಶಿವಯೋಗಿ ಮಹಾಸ್ವಾಮೀಜಿಯಿಂದ ಜಿಲ್ಲಾಧಿಕಾರಿಗೆ ಮನವಿ
ದೇವರಹಿಪ್ಪರಗಿ : ಸಕಾಲಕ್ಕೆ ಮಳೆ ಬಾರದೆ ಬೆಳೆಯೆಲ್ಲ ಒಣಗಿ ಬರಗಾಲ ಛಾಯೆ ಆವರಿಸಿದ್ದರಿಂದ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳೊಂದಿಗೆ ಪಟ್ಟಣದ ಆವುಗೇಶ್ವರ ತಪೋಧಾಮ ಪರದೇಶಿಮಠದ ಹೊಲ ಹಾಗೂ ಸುತ್ತಮುತ್ತಲಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು.

ಒಣಗಿದ ಬೆಳೆ ವೀಕ್ಷಣೆ ಮಾಡಿ, ಹಲವಾರು ರೈತರು, ಕಂದಾಯ, ಕೃಷಿ ಅಧಿಕಾರಿಗಳಿಂದ ಮಳೆ ಕೊರತೆ, ಬರಗಾಲ ಛಾಯೆ, ಜನ-ಜಾನುವಾರು ಬವಣೆ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿ ಪಡೆದರು.

ಸ್ಥಳೀಯ ಆವುಗೇಶ್ವರ ತಪೋಧಾಮ ಪರದೇಶಿಮಠದ ಪೂಜ್ಯಶ್ರೀ ಶಿವಯೋಗಿ ಮಹಾಸ್ವಾಮೀಜಿ ಮಾತನಾಡಿ, ಈ ವರ್ಷ ಸಂಪೂರ್ಣ ಮಳೆಗಾಲ ಇಲ್ಲದಂತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿಶತ 10ರಷ್ಟು ಬಿತ್ತನೆಯಾಗಿಲ್ಲ. ಬೀಜ ಗೊಬ್ಬರ ಖರೀದಿ ಮಾಡಿ ಮನೆಯಲ್ಲಿಟ್ಟಿದ್ದಾರೆ. ಆದರೆ ಮಳೆರಾಯನ ಮುನಿಸಿನಿಂದ ಕಂಗಾಲಾಗಿದ್ದಾರೆ. ಹೊಲಗದ್ದೆಗಳೆಲ್ಲ ಖಾಲಿಯಾಗಿವೆ. ಒಂದು ವೇಳೆ ಇನ್ನು ಮುಂದೆ ಮಳೆ ಬಂದರೂ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಮುಂಗಾರು ಬೆಳೆ ಸಂಪೂರ್ಣ ಬೆಳೆಯದಂತಾಗಿದೆ. ಅದಕ್ಕಾಗಿ ತಕ್ಷಣವೇ ಬರಗಾಲ ಘೋಷಣೆ ಮಾಡಿ ರೈತರಿಗೆ ಬೆಳೆ ಪರಿಹಾರ, ಬರಗಾಲ ಪರಿಹಾರ ನೀಡಬೇಕು ಎಂದು ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಆನಂದ ಕೆ., ನಾನೇ ಖುದ್ದಾಗಿ ಬೆಳೆ ವೀಕ್ಷಣೆ ಮಾಡುತ್ತಿದ್ದೇನೆ. ಈಗಾಗಲೇ ಜಿಲ್ಲೆಯ ಹಲವಾರು ಭಾಗಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದೇನೆ. ಎಲ್ಲವನ್ನು ಸಂಗ್ರಹಿಸಿ, ಮಾಹಿತಿ ಕ್ರೋಢೀಕರಿಸಿ ಸರ್ಕಾರಕ್ಕೆ ನಿಖರವಾದ ಮಾಹಿತಿ ಸಲ್ಲಿಸಿ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಡಿಡಿಎ ಚಂದ್ರಕಾಂತ ಪವಾರ, ಎಡಿಎ ಪ್ರಶಾಂತ ಸಾಣಿ, ದೇವರಹಿಪ್ಪರಗಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಕಂದಾಯ ಇಲಾಖೆ ಅಧಿಕಾರಿ ರಮಾನಂದ ಚಕಡಿ, ರೈತರಾದ ಸತೀಶ ಪರದೇಶಿಮಠ, ಮುರುಗೇಂದ್ರಯ್ಯ ಇಂಡಿ, ಸಂಗಮೇಶ್, ಮಸಬಿನಾಳ ವೀರಭದ್ರಯ್ಯ ಇಂಡಿ, ಲಕ್ಷ್ಮಣ್ ವಡ್ಡರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net