ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸದಂತೆ ಎಚ್ಚರ ವಹಿಸಿ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ. ಎಂ.

ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಜಾನಕಿ ಕೆ. ಎಂ., ಸಿ.ಎನ್​. ಶ್ರಿಧರ, ಡಾ. ದುರಗೇಶ್​ ಕೆ. ಆರ್​, ಗಂಗಪ್ಪ ಎಂ, ಬಸನಗೌಡ ಕೊಟೂರು ಹಲವರು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಜಾನಕಿ ಕೆ. ಎಂ., ಸಿ.ಎನ್​. ಶ್ರಿಧರ, ಡಾ. ದುರಗೇಶ್​ ಕೆ. ಆರ್​, ಗಂಗಪ್ಪ ಎಂ, ಬಸನಗೌಡ ಕೊಟೂರು ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಸಾರ್ವಜನಿಕ ಸೇವೆ ಮತ್ತು ಬಾಕಿ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ. ಎಂ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕಂದಾಯ, ಆಡಳಿತ ಹಾಗೂ ಇಲಾಖಾ ಕಾರ್ಯಕಲಾಪಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದಿರುವ ಆಡಳಿತಾತ್ಮಕ ಕಡತಗಳು, ಸಾರ್ವಜನಿಕ ಅಜಿರ್ಗಳು ಹಾಗೂ ಜಮೀನು ಮತ್ತು ಕಂದಾಯಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಶ್ರೀ ವಿಲೇವಾರಿ ಆಗಬೇಕು. ಹಲವು ವರ್ಷಗಳಿಂದ ಅಥವಾ ತಿಂಗಳುಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿರುವ ಕಡತಗಳನ್ನು ತಕ್ಷಣವೇ ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕು. ಕಡತಗಳಿಗೆ ಸಂಬಂಧಿಸಿದ ಅಗತ್ಯ ಪೂರಕ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ಲೋಪಗಳಿದ್ದಲ್ಲಿ ತಕ್ಷಣವೇ ಸಂಬಂಧಪಟ್ಟವರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆ ಹಾಗೂ ಅಪೀಲುಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ನಿಖರವಾದ ಮಾಹಿತಿ ಒದಗಿಸಬೇಕು. ಅಜಿರ್ಗಳನ್ನು ಅನಗತ್ಯವಾಗಿ ಮುಂದೂಡುವ ಧೋರಣೆ ಬಿಡಬೇಕು. ಅಧಿಕಾರಿಗಳು ಕೇವಲ ಕಚೇರಿಯ ಕಡತಗಳಿಗಷ್ಟೇ ಸೀಮಿತವಾಗದೆ, ಅಗತ್ಯವಿದ್ದರೆ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಉಪವಿಭಾಗ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಕಂದಾಯ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಹಾಗೂ ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೇವೆಗಳನ್ನು ತಲುಪಿಸಬೇಕು. ಅರ್ಚಕರು, ದೇವಾಲಯದ ಸಿಬ್ಬಂದಿ ಹಾಗೂ ತಹಸೀಲ್ದಾರ್​ಗಳು ಆಡಳಿತಾತ್ಮಕ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅರ್ಚಕರು ಹಾಗೂ ದೇವಾಲಯದ ಆಸ್ತಿ, ಸೇವೆಗಳಿಗೆ ಸಂಬಂಧಿಸಿದಂತೆ ಆಧಾರ್​ ಮತ್ತು ಭೂ ದಾಖಲೆಗಳ ಮಾಹಿತಿಗಳನ್ನು ಕಡ್ಡಾಯವಾಗಿ ನವೀಕರಿಸಿ ಸರಿಪಡಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್​ಗಳು ದೇವಾಲಯಗಳ ಪೂಜಾ ವಿಧಿವಿಧಾನಗಳು ಮತ್ತು ಸಿಬ್ಬಂದಿ ನಿರ್ವಹಣೆಯ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಬೇಕು. ದೇವಾಲಯಗಳ ಸುರಕ್ಷತೆಗೆ ಹಾಗೂ ಪಾರದರ್ಶಕತೆಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ನಿರಂತರವಾಗಿ ಮಾನಿಟರ್​ ಮಾಡಬೇಕು. ದೇವಾಲಯಗಳ ಆದಾಯ, ಹೂಂಡಿ ಎಣಿಕೆ ಹಾಗೂ ಖರ್ಚು-ವೆಚ್ಚಗಳ ಲೆಕ್ಕಪತ್ರಗಳನ್ನು ನಿಯಮಿತವಾಗಿ ಪರಿಶೋಧಿಸಿ ವರದಿ ಸಲ್ಲಿಸಬೇಕು ಎಂದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಾನಕಿ ಹೇಳಿದರು
ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಮಾತನಾಡಿ, ತಾಲೂಕು ಮಟ್ಟದ ಬೂ ಕಂದಾಯ ಪ್ರಕ್ರಿಯೆಗಳು, ಆಕಾರ್​ ಬಂದ್​ ಗೆ ಸಂಬಂಧಿಸಿದ ತಿದ್ದುಪಡಿಗಳು ಹಾಗೂ ಸಾರ್ವಜನಿಕರ ಅಜಿರ್ಗಳ ತ್ವರಿತ ವಿಲೇವಾರಿ ಕುರಿತು ಮುಖ್ಯವಾಗಿ ಗಮನಹರಿಸಬೇಕು. ಗ್ರಾಮ ಮಟ್ಟದಲ್ಲಿ ಖಾತೆ ಬದಲಾವಣೆ ಹಾಗೂ ಕಷ್ಟಕರವಾದ ಪ್ರಕ್ರಿಯೆಗಳನ್ನು ಆದಷ್ಟು ಬೇಗ ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ. ಆರ್​, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ವಿವಿಧ ತಾಲೂಕುಗಳ ತಹಸೀಲ್ದಾರರು, ಮುಜರಾಯಿ ಇಲಾಖೆಯ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net