ಪರೀಕ್ಷೆ ಎದುರಿಸಲು ಮಕ್ಕಳಿಗೆ ಧೈರ್ಯ ತುಂಬಿದ ಡಿ.ಸಿ. ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ

,
,
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ವಾಣಿ ‘ಫೋನ್ ಇನ್ ಕಾರ್ಯಕ್ರಮ
ಕಲಬುರಗಿ : ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಆಯೋಜಿಸಿದ ಕಲ್ಯಾಣ ವಾಣಿ ನೇರ ‘ಫೋನ್ ಇನ್ ಕಾರ್ಯಕ್ರಮ’ ದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಕ್ಕಳ ಚುಟುಕು ಪ್ರಶ್ನೆಗೆ ನೇರವಾಗಿ ಉತ್ತರಿಸಿ ಅವರ ಸಂದೇಹಗಳನ್ನು ನಿವಾರಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಡಿ.ಸಿ ಮತ್ತು ಜಿಲ್ಲಾ ಪಂಚಾಯ್ ಸಿ.ಇ.ಓ ಅವರು ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಪರೀಕ್ಷೆಯನ್ನು ಖುಷಿ-ಖುಷಿಯಿಂದ ಬರೆಯಬೇಕು. ಯಾವುದೇ ಭಯ, ಒತ್ತಡಕ್ಕೆ ಒಳಗಾಗದೆ ತಪ್ಪು ಬರೆಯುವ ಪ್ರಯತ್ನ ಮಾಡಬೇಡಿ. ಕಠಿಣ ಪ್ರಶ್ನೆಗಲಿಗೆ ಮೊದಲು ಉತ್ತರಿಸಿ. ಸಮಯ ಪರಿಪಾಲನೆ ತುಂಬಾ ಮುಖ್ಯ. ಫಲಿತಾಂಶ ಸುಧಾರಣೆಗೆ ಅವಕಾಶ ಉಂಟು ಎಂಬಿತ್ಯಾದಿ ಸಲಹೆಗಳನ್ನು ಮಕ್ಕಳಿಗೆ ನೀಡಿ ಪರೀಕ್ಷೆ ಭಯ ನಿವಾರಿಸುವ ಪ್ರಯತ್ಮ ಮಾಡಿದರು. ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕ-ಪೋಷಕರೂ ಸಹ ನೇರ ಫೋನ್ ಇನ್ ನಲ್ಲಿ ಭಾಗಿಯಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು.
ಮೊದಲಿಗೆ ಅಕ್ಷತಾ ಹಡಲಗಿ ಎಂಬ ವಿದ್ಯಾರ್ಥಿನಿಯು ಕರೆ ಮಾಡಿ, ಈಗಾಗಲೇ ಪರೀಕ್ಷಾ ಮಂಡಳಿಯವರು ಪ್ರಕಟಿಸಿದ 4 ಮಾದರಿ ಪ್ರಶ್ನೆ ಪತ್ರಿಕೆಗಳಿಂದ ಮಾತ್ರ ವಾರ್ಷಿಕ ಪರೀಕ್ಷೆಯಲ್ಲಿ ಪ್ರಶ್ನೆಗಳು ಬರುತ್ತವೆಯೇ? ಎಂದು ಪ್ರಶ್ನಿಸಿದಳು. ಡಿ.ಸಿ. ಉತ್ತರಿಸುತ್ತಾ ಅವು ಮಾದರಿಯಾಗಿದ್ದುಮ, ಸಂಭವನಿಯ ಪ್ರಶ್ನೆಗಳಿವೆ ಅಷ್ಟೆ ಎಂದರು. ಕಲಬುರಗಿ ಉತ್ತರ ವಲಯದ ಕಲ್ಲಹಂಗರಗಾ ಪ್ರೌಢ ಶಾಲೆಯ ಸುನಿತಾ ಕರೆ ಮಾಡಿ ‘ಎಲ್.ಬಿ.ಎ’ ಆಧಾರಿತ ಪ್ರಶ್ನೆಗಳಾಚೆ ಪ್ರಶ್ನೆಗಳು ಸಮಾಜ ವಿಜ್ಞಾನದಲ್ಲಿ ಬಂದಿವೆ ಎಂದಾಗ, ‘ಅರಿವೇ ಗುರು’ ಎಂಬ ಪಠ್ಯಾಧರಿತ ಪರೀಕ್ಷಾ ಮಾರ್ಗದರ್ಶಿ ಓದುವಂತೆ ಸಲಹೆ ನೀಡಿದರು.
ರಾಘವೇಂದ್ರ ಎಂಬ ವಿದ್ಯಾರ್ಥಿಯು ಪರೀಕ್ಷೆ ಬರೆಯುವಾಗ ಸಮಯ ಹೇಗೆ ಸರಿದೂಗಿಸಬೇಕು? ಎಂದು ಕೇಳಿದ ಪ್ರಶ್ನೆಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಉತ್ತರಿಸಿ ಕೇಳುಗರ ಮನಃ ಮುಟ್ಟುವಂತೆ ಸಮಯ ಪರಿಪಾಲನೆ ಕುರಿತು ಮಾರ್ಗದರ್ಶನ ಮಾಡಿದರು. ಆರಂಭದಿಂದ ಮುಕ್ತಾಯದ ವರೆಗೆ ಯಾವೆಲ್ಲ ಪ್ರಶ್ನೆಗಳಿಗೆ ಮೊದಲು ಆದ್ಯತೆ ನೀಡಬೇಕೆಂದು ಸವಿಸ್ತಾವರವಾಗಿ ವಿವರಿಸಿದರು.
ಆಳಂದ ತಾಲ್ಲೂಕಿನ ಪಡಸಾವಳಗಿ ಸರಕಾರಿ ಪ್ರೌಢ ಶಾಲೆಯ ಕಾವೇರಿ, ಚಿತಲಿಯ ಸರಕಾರಿ ಪ್ರೌಢ ಶಾಲೆಯ ಸಾಕ್ಷಿ, ಸೇಡಂ ತಾಲೂಕಿನ ಬಿಬ್ಬಳ್ಳಿಯ ಆರ್.ಎಂ.ಎಸ್.ಎ ಪ್ರೌಢ ಶಾಲೆಯ ಸಪ್ನಾ ಪಾಟೀಲ, ಕೊಡದೂರ ಪ್ರೌಢ ಶಾಲೆಯ ರಾಜು, ಜೇವರ್ಗಿ ತಾಲ್ಲೂಕಿನ ವರ್ಷ, ಚಿತ್ತಾಪೂರ ತಾಲ್ಲೂಕಿನ ಶಾಂತರೆಡ್ಡಿ, ಹೀಗೆ ವಿವಿಧ ತಾಲೂಕುಗಳಿಂದ ಹಾಗೂ ಯಾದಗಿರಿ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಕರೆ ಮಾಡಿ ತಮ್ಮಲ್ಲಿ ಅಡಗಿರುವ ಪ್ರಶ್ನೆಗೆ ಉತ್ತರ ಕಂಡುಕೊಂಡರು. ಎಲ್ಲಾ ಪ್ರಶ್ನೆಗಳನ್ನು ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಣೆ, ಪಲಿತಾಂಶ ಸುಧಾರಣೆ ಮತ್ತು ಅಭ್ಯಾಸಕ್ಕಾಗಿ ಪ್ರೇರಣೆಗೊಳಿಸುವ ಮಾತನಾಡಿ, ಮಕ್ಕಳಿಗೆ ಚೆನ್ನಾಗಿ ಪರೀಕ್ಷೆ ಬರೆಯುವಂತೆ ಹುರಿದುಂಬಿಸಿದರು.
ಇದಕ್ಕು ಮೊದಲು ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸಕ್ತ ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆಗೆ ಕೈಗೊಳ್ಳಲಾದ ವ್ಯವಸ್ಥಿತವಾದ ಯೋಜಿತ ಅಂಶಗಳನ್ನು ಶೋತೃಗಣಕ್ಕೆ ವಿವರಿಸಿದರು. ಕಲಬುರಗಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಬಿ.ಸಿದ್ದಣ್ಣ ಅವರು ಪೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net