

ನಂದಗುಡಿ :
ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಮಾತ್ರ ಹೈನೋದ್ಯಮದ ಬೆಳವಣಿಗೆ ಸಾಧ್ಯ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ ಎಂದು ಬಮುಲ್ ಒಕ್ಕೂಟ, ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಟಿ.ಎಂ.ಆನಂದ್ ಹೇಳಿದರು.
ಹೋಬಳಿ ಎನ್.ಹೊಸಹಳ್ಳಿ ಎಂಪಿಸಿಎಸ್ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಸರ್ಕಾರ ಮತ್ತು ಬಮುಲ್ನಿಂದ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಿ ಆರ್ಥಿಕಮಟ್ಟ ಸುಧಾರಿಸುವತ್ತ ಮುನ್ನಡೆಯುತ್ತಿದೆ. ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಅಧಿಕ ಲಾಭ ಗಳಿಸಬೇಕು ಎಂದರು.
ಸಂಘವು 2025&26ನೇ ಸಾಲಿನಲ್ಲಿ 23.78 ಲಕ್ಷ ರೂ. ವ್ಯಾಪಾರ ಲಾಭಾಂಶದಲ್ಲಿ 6.71 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 8.21 ಲಕ್ಷ ರೂ. ರೈತರಿಗೆ ಪ್ರೋತ್ಸಾಹ ಧನ ಸಿಗಲಿದೆ. ಈ ವರ್ಷ ರೈತರಿಗೆ ಶೇ.3.18ರಷ್ಟು ಬೋನಸ್ ವಿತರಿಸಲಾಗುವುದು. ರೈತರು ಗುಣಮಟ್ಟದ ಹಾಲು ಪೂರೈಸಿದಲ್ಲಿ ಮಾತ್ರ ಸಂಘವು ಪ್ರಗತಿಯತ್ತ ಸಾಗುತ್ತದೆ.
ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡುವುದಲ್ಲದೆ, ರೋಗಗಳು ಬಾರದಂತೆ ಆಯುರ್ವೇದ ಮೂಲಿಕೆ ಬಳಕೆ ಮಾಡಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಕೆ, ಸ್ವಚ್ಛತೆಯಿಂದ ಕೆನೆಭರಿತ ಹಾಲು ಉತ್ಪಾದಿಸಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ವೆಂಚಲರೆಡ್ಡಿ ಇಂದಿರೆಡ್ಡಿ ಮಾತನಾಡಿ, ಕೆನರಾ ಬ್ಯಾಂಕಿನಲ್ಲಿ ದೊರೆಯುವ ಕೆಸಿಸಿ ಸಾಲ ಹಾಗೂ ಆರ್ಡಿ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ರಾಸುಗಳ ಸಾಲ ಸೇರಿ ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು.
ನಿರ್ದೇಶಕರಾದ ಎಂ.ಬೈಯಣ್ಣ, ಎನ್.ಈರೇಗೌಡ, ಅನಿಲ್ಕುಮಾರ್, ಸುಬ್ರಹ್ಮಣಿ, ಮುಜೀಬ್ ಪಾಷಾ, ಅಬ್ದುಲ್ ರಫೀಕ್, ಜೆ.ಭುವನಕುಮಾರಿ, ಮಂಜುಳಾ, ಮುಖ್ಯ ಕಾರ್ಯನಿರ್ವಾಹಕ ಜಿ.ವಿಕಾಸ್, ಹಾಲು ಪರೀಕ್ಷಕ ಎಚ್.ಎಂ.ಸಂಜಯ್, ಸಹಾಯಕರಾದ ಪವನ್, ಮುನಿರಾಜ, ರೈತರು ಭಾಗವಹಿಸಿದ್ದರು.