ಪಟ್ಟನಾಯಕನಹಳ್ಳಿ : ಕೃಷಿ ಜತೆಗೆ ಉಪ ಕಸುಬನ್ನಾಗಿ ಕುರಿ, ಮೇಕೆ, ಜಾನುವಾರುಗಳ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡುವುದರಿಂದ ಆರ್ಥಿಕ ಆಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ಶಿರಾ ತಾಲೂಕಿನ ಹೆಂದೊರೆಯಲ್ಲಿ ಮಂಗಳವಾರ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿ, ನಾನು ಈ ಹಿಂದೆ ಸಚಿವನಾಗಿದ್ದ ಸಮಯದಲ್ಲಿ 9 ಹೊಸ ಪಶು ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದೆ. ಇದೀಗ ದೊಡ್ಡಬಾಣಗೆರೆ ಮತ್ತು ಹೆಂದೊರೆ ಗ್ರಾಮದಲ್ಲಿ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು.
ರೈತರ ಆರೋಗ್ಯ ಸ್ಥಿರವಾಗಿರಲು ಪಶುಪಾಲನೆ ಸಹಕಾರಿ. ಪ್ರಸಕ್ತ ಸ್ಥಿತಿಯಲ್ಲಿ ಸಣ್ಣ ರೈತರಿಗೆ ಹೈನುಗಾರಿಕೆ ವರವಾಗಿದ್ದು, ಯುವಕರು ಹಸುಗಳನ್ನು ಸಾಕಾಣಿಕೆ ಮಾಡಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಐಟಿ&ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಯುವಕರು ಕೂಡ ಕೃಷಿಯತ್ತ ಒಲವು ತೋರುತ್ತಿದ್ದು, ಕೃಷಿಯಲ್ಲಿ ನೆಮ್ಮದಿ ಕಂಡು ಕೊಳ್ಳುವ ಸ್ಥಿತಿ ನಿಮಾರ್ಣವಾಗಲಿದೆ ಎಂದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಪತ್ ಕುಮಾರ್ ಮಾತನಾಡಿ, ಇಲಾಖೆಯು ಜಾನುವಾರುಗಳ ರಕ್ಷಣೆ ಮತ್ತು ಉತ್ಪಾದನೆಗೆ ಒತ್ತು ನೀಡಿ ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿದೆ ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಆನಂದ್, ಮಾಜಿ ಸದಸ್ಯರಾದ ರಂಗನಾಥಪ್ಪ, ಶಿವಣ್ಣ, ಮೋಹನ್, ದೇವರಾಜ್, ಬಾಬಾಜಾನ್ ಮತ್ತಿತರರು ಇದ್ದರು