ಪರರಾಜ್ಯದವರಿಗಿಲ್ಲ ಗ್ಯಾರಂಟಿ; ದುರ್ಬಳಕೆಗೆ ಕಡಿವಾಣ | ಅರ್ಹರಿಗೆ ಮಾತ್ರ ಗೃಹಲಕ್ಷ್ಮಿ, ಗೃಹಜ್ಯೋತಿ

Guarantee | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Guarantee | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಪಂಚ ಗ್ಯಾರಂಟಿ’ಗಳ ಪೈಕಿ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ದುರ್ಬಳಕೆಗೆ ಕಡಿವಾಣ ಹಾಕಲು ನಿರ್ಣಾಯಕ ಹೆಜ್ಜೆಯಿರಿಸಲಾಗಿದೆ. ಅನರ್ಹರ ಪಾಲಾಗುತ್ತಿರುವ ಸಾರ್ವಜನಿಕ ಹಣವನ್ನು ಉಳಿಸುವ ಹಾಗೂ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಉದ್ದೇಶದಿಂದ ಫಲಾನುಭವಿಗಳ ಸಮಗ್ರ ಮಾಹಿತಿ ಮತ್ತು ದಾಖಲೆಗಳ ಮರುಪರಿಶೀಲನೆಗೆ ತೀರ್ವನಿಸಲಾಗಿದೆ. ಮೃತರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಮತ್ತು ಅನ್ಯ ರಾಜ್ಯಗಳ ಮೂಲದವರು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರ ಯೋಜನೆ ರೂಪಿಸಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾವು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿಲ್ಲ ಅಥವಾ ಪರಿಷ್ಕರಣೆ ಮಾಡುತ್ತಿಲ್ಲ. ಆದರೆ, ಫಲಾನುಭವಿಗಳ ಮೊಬೈಲ್ ಸಂಖ್ಯೆ ಮತ್ತು ಇತರೆ ವಿವರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದು ದಾಖಲೆ ಸಮೇತ ಪತ್ತೆಯಾಗಿದೆ. ಅರ್ಹತೆ ಇಲ್ಲದವರೂ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೊಷಿಸಲಾಗಿದ್ದು, ಸದ್ಯ 1.64 ಕೋಟಿ ಫಲಾನುಭವಿಗಳಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ ಒಬ್ಬರ ಹೆಸರಲ್ಲೇ ಐದಾರು ವಿದ್ಯುತ್ ಮೀಟರ್​ಗಳಿರುವುದು ಪತ್ತೆಯಾಗಿದೆ. ಕೆಲವರು ವಾಸದ ಮನೆ ಎಂದು ವಿದ್ಯುತ್ ಸಂಪರ್ಕ ಪಡೆದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ, ಇನ್ನು ಕೆಲವರು ಬಾಡಿಗೆ ಮನೆಗಳಿಗೆ ಬಳಸುತ್ತಿದ್ದಾರೆ. ಈ ಬಾಡಿಗೆ ಮನೆಗಳಲ್ಲಿ ನಮ್ಮ ರಾಜ್ಯದವರಿದ್ದಾರೋ ಅಥವಾ ಪರರಾಜ್ಯದವರಿದ್ದಾರೋ ಎಂಬ ಸ್ಪಷ್ಟ ಮಾಹಿತಿ ಸರ್ಕಾರದ ಬಳಿ ಇಲ್ಲ.
ಅರ್ಹತೆ ಇರುವವರು ಉಚಿತ ವಿದ್ಯುತ್ ಪಡೆದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕರ್ನಾಟಕದವರೇ ಆಗಿರಬೇಕು ಎನ್ನುವುದು ನಿಯಮ. ಕೆಲವು ಕಡೆಗಳಲ್ಲಿ ಪರರಾಜ್ಯದವರು ಬಾಡಿಗೆಗೆ ವಾಸವಿದ್ದಾರೆ. ಅವರಿಗೆ ಈ ಗ್ಯಾರಂಟಿ ಯೋಜನೆಗಳ ಅಗತ್ಯವೇನಿದೆ? ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಬಳಸುವವರನ್ನು ಮತ್ತು ಅನರ್ಹರನ್ನು ಪತ್ತೆಹಚ್ಚಲು ಮಾತ್ರವೇ ಈ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆಯೇ ಹೊರತು ಇದು ಯೋಜನೆಗಳ ಕಡಿತವಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಅರ್ಹರ ಪತ್ತೆ ಹೇಗೆ..?

1. ಆಧಾರ್ ಇ-ಕೆವೈಸಿ - ಗೃಹಲಕ್ಷ್ಮಿ ಫಲಾನುಭವಿಗಳ ಆಧಾರ್ ಕೆವೈಸಿ ಕಡ್ಡಾಯವಾಗಿ ಅಪ್​ಡೇಟ್ ಮಾಡಿಸುವುದು.
2. ದಾಖಲೆಗಳ ಮರುಸಂಗ್ರಹ - ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ದಾಖಲಿಸುವುದು.
3. ಮಾಲೀಕರ ವಿವರ - ಗೃಹಜ್ಯೋತಿ ಯೋಜನೆ ಪಡೆದುಕೊಂಡಿರುವ ಮನೆಗಳ ಮಾಲೀಕರ ಸಂಪೂರ್ಣ ಮಾಹಿತಿ ಕಲೆಹಾಕುವುದು.
4. ಬಾಡಿಗೆದಾರರ ಪತ್ತೆ - ಬಾಡಿಗೆ ಮನೆಯಲ್ಲಿ ವಾಸವಿರುವ ಫಲಾನುಭವಿಗಳು ಮೂಲತಃ ಯಾವ ರಾಜ್ಯದವರು ಎಂಬ ಮಾಹಿತಿ ಸಂಗ್ರಹಿಸುವುದು.
5. ಉದ್ದೇಶದ ತಪಾಸಣೆ - ಗೃಹ ಬಳಕೆಯ ವಿದ್ಯುತ್ ಸಂಪರ್ಕ ಪಡೆದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರನ್ನು ಪತ್ತೆಹಚ್ಚುವುದು.

ಮೂರು ಕೋಟಿ ಜನರಿಗೆ ಗ್ಯಾರಂಟಿ

ಗೃಹಲಕ್ಷ್ಮಿ ಯೋಜನೆಯಲ್ಲಿ ಒಟ್ಟು 1.24 ಕೋಟಿ ಫಲಾನುಭವಿಗಳಿದ್ದು, ಇದುವರೆಗೆ 69,783 ಕೋಟಿ ರೂ. ಜಮೆ ಮಾಡಲಾಗಿದೆ. ಫೆ.26ರಂದೇ 2,480 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಒಟ್ಟು 1.64 ಕೋಟಿ ಫಲಾನುಭವಿಗಳಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಸರ್ಕಾರದಿಂದ 26,115 ಕೋಟಿ ರೂ. ಹಣ ಬಿಡುಗಡೆಯಾಗಿದೆ.

ಪರಿಷ್ಕರಣೆಗೆ ಒತ್ತಾಯ

ಗ್ಯಾರಂಟಿ ಯೋಜನೆಗಳ ಸೌಲಭ್ಯ ಅನರ್ಹರ ಪಾಲಾಗುತ್ತಿದ್ದು, ನಿಜವಾದ ಬಡವರಿಗೆ ತಲುಪುತ್ತಿಲ್ಲ ಎಂದು ಎಸ್​ಐಆರ್ ಕುರಿತ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ನಾಯಕರೇ ಆಕ್ಷೇಪ ಎತ್ತಿದ್ದರು. ಯೋಜನೆಗಳನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ಸಹ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ವರದಿ ಪಡೆದಿರುವ ಸರ್ಕಾರ, ಸದ್ಯಕ್ಕೆ ಯೋಜನೆಯ ನಿಯಮಗಳನ್ನು ಬದಲಿಸದೆ ಫಲಾನುಭವಿಗಳ ನಿಖರ ಮಾಹಿತಿ ಮತ್ತು ದಾಖಲೆಗಳನ್ನು ಕ್ರೋಡೀಕರಿಸಲು ಮುಂದಾಗಿದೆ.

ಮೃತರ ಹೆಸರಿಗೆ ಗ್ಯಾರಂಟಿ ಹಣ

ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಲ್ಲಿಯೂ ದೊಡ್ಡ ಮಟ್ಟದ ಲೋಪಗಳು ಬೆಳಕಿಗೆ ಬಂದಿವೆ. ಮರಣ ಹೊಂದಿದ ಮಹಿಳೆಯರ ಬ್ಯಾಂಕ್ ಖಾತೆಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿದ್ದು, ಅದನ್ನು ಅವರ ಕುಟುಂಬಸ್ಥರು ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಖಾತೆಗಳನ್ನು ಪತ್ತೆ ಹಚ್ಚಿ ಸ್ಥಗಿತಗೊಳಿಸುವುದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 120 ಕೋಟಿ ರೂ. ಉಳಿತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಮೃತರ ಹೆಸರಿಗೆ ಹಣ ಹೋಗುವುದನ್ನು ತಪ್ಪಿಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಿಸಲು ದಾಖಲೆಗಳ ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net