ಜಮಖಂಡಿ ನಗರದಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತೆ ಡಾ. ಆಶಾದೇವಿ ಗುಡಗುಂಟಿ ಅವರನ್ನು ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮೀ ತುಂಗಳ, ಶಾರದಾ ಮುಳ್ಳೂರ, ಗೌರಿ ಈಶ್ವರ ಇತರರಿದ್ದರು.
ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮೀ ತುಂಗಳ ಹೇಳಿಕೆ
ಡಾ. ಆಶಾದೇವಿ ಗುಡಗುಂಟಿ ಅವರ ಅಭಿನಂದನಾ ಸಮಾರಂಭ
ಜಮಖಂಡಿ: ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮೀ ತುಂಗಳ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾಣಿ ಚನ್ನಮ್ಮ ಮಹಿಳಾ ಮಂಡಳ, ಭ್ರಮರಾಂಬ ಮಹಿಳಾ ಮಂಡಳ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ಆಶಾದೇವಿ ಗುಡಗುಂಟಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸಮಾಜಮುಖಿ ಕಾರ್ಯ ಮಾಡುವ ಸಂಸ್ಕಾರ ಮತ್ತು ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಜೊತೆಗೆ ಮಹಿಳೆಯರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಆಶಾದೇವಿ ಗುಡಗುಂಟಿ ಮಾತನಾಡಿ, ವಿಶ್ವವಿದ್ಯಾಲಯವು ನನ್ನ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಮಹಿಳಾ ಶಿಕ್ಷಣ ಮತ್ತು ಸಮಾಜದ ಏಳಿಗೆಗಾಗಿ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದು ತಿಳಿಸಿದರು.
ಸಾಹಿತಿ ಶಾರದಾ ಮುಳ್ಳೂರ ಮಾತನಾಡಿ, ಸಾಧನೆ ಎಂಬುದು ಒಂದೇ ದಿನಕ್ಕೆ ಒಲಿಯುವಂಥದ್ದಲ್ಲ. ಅದಕ್ಕೆ ಆತ್ಮಶಕ್ತಿ ಮತ್ತು ಆತ್ಮವಿಶ್ವಾಸ ಅತೀ ಮುಖ್ಯ. ಸಾಮಾಜಿಕ ಕಳಕಳಿ ಇರುವ ಶ್ರೀಮಂತರು ಸಮಾಜಕ್ಕೆ ಏನು ನೀಡುತ್ತಾರೆ ಎಂಬುದನ್ನು ಲೋಕ ಗಮನಿಸುತ್ತಿರುತ್ತದೆ. ಕಲೆ ಮತ್ತು ಸಾಹಿತ್ಯವನ್ನು ಆಸ್ವಾದಿಸುವ ಗುಣ ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ
ಎಂದರು.
ಗೌರಿ ಈಶ್ವರ ಮಾತನಾಡಿ, ಮಹಿಳೆ ಕೇವಲ ಮನೆಗೆ ಮಾತ್ರ ಸೀಮಿತವಲ್ಲ. ಆಕೆಯ ಶ್ರಮ ಮತ್ತು ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಪ್ರತಿಕ್ಷಣವೂ ಹೊಸತನ್ನು ಕಲಿಯುವ ಹಂಬಲ ಹೊಂದಿರಬೇಕು ಎಂದು ತಿಳಿಸಿದರು.
ಉಷಾ ರುದ್ರಸ್ವಾಮಿಮಠ, ಪ್ರತಿಭಾ ಅಕ್ಕಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸವಿತಾ ಸನದಿ, ಗಿರಿಜಾ ಮೇತ್ರಿ ಮತ್ತು ಗೀತಾ ಹಿರೇಮಠ ಇದ್ದರು. ರಜನಿ ಕರಡಿ ಪ್ರಾರ್ಥಿಸಿದರು, ಕೀರ್ತಿ ಗುಡಗುಂಟಿ ಸ್ವಾಗತಿಸಿದರು. ಅನಿತಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದಾನಮ್ಮ ಪಂಚಗಟ್ಟಿಮಠ ನಿರೂಪಿಸಿದರು.