ಏ.22 ರಂದು ಸಿಯು‌ಕೆ 10ನೇ ಘಟಿಕೋತ್ಸವ: ಉಪರಾಷ್ಟ್ರಪತಿ ರಾಧಾಕೃಷ್ಣನ್, ರಾಜ್ಯಪಾಲ ಗೆಹ್ಲೋಟ್ ಭಾಗಿ

,
,
Published on

ಪ್ರಮುಖ ಮುಖ್ಯಾಂಶಗಳು

  • 769 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಪ್ರೊ ಬಟ್ಟು ಸತ್ಯನಾರಾಯಣ ಹೇಳಿಕೆ*
ಕಲಬುರಗಿ: ಇಲ್ಲಿಗೆ ಸಮೀಪದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಇದೇ ಏಪ್ರಿಲ್ 22 ರಂದು ವಿ.ವಿ. ಕ್ಯಾಂಪಸ್ ನಲ್ಕಿ ಆಯೋಜಿಸಿದ್ದು, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಶನಿವಾರ ಕಡಗಂಚಿಯಲ್ಲಿರುವ ವಿ.ವಿ.ಯ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30 ಗಂಟೆಗೆ ವಿ.ವಿ. ಬಹುಪಯೋಗಿ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದ್ದು, ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಸಹ ಭಾಗಿಯಾಗಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ‌ ಉಪ ರಾಷ್ಟ್ರಪತಿಗಳ ಆಗಮಿಸುತ್ತಿರುವುದರಿಂದ ಹೆಚ್ಚಿನ‌ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಶಿಷ್ಠಚಾರದಂತೆ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಅಧಿಕಾರಿ ವರ್ಗದವರು, ಪಾಲಕರು ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಭಾಗವಹಿಸಬೇಕು. ಘಟಿಕೋತ್ಸವದ ಯಶಸ್ವಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ದೇಶದಲ್ಲಿಯೆ ಮುಂಚೂಣಿಯಾಗಿ ಬೆಳೆಯುತ್ತಿರುವ ವಿ.ವಿ.ಗಳಲ್ಲಿ ಒಂದಾಗಿದೆ. 34 ವಿಭಾಗಗಳನ್ನು ಹೊಂದಿದ್ದು, 34 ಯು.ಜಿ, 15 ಪಿ.ಜಿ. ಕೋರ್ಸ್ ಬೋಧನೆ ಮಾಡಲಾಗುತ್ತಿದೆ. ಪ್ರಸಕ್ತ‌ 2026-27ರಿಂದ ಮತ್ತೆ 5 ಹೊಸ ಪದವಿ ಕೋರ್ಸ್ ಆರಂಭಿಸಲಾಗಿದೆ. ಪ್ರಸ್ತುತ ಸುಮಾರು 3,200 ವಿದ್ಯಾರ್ಥಿಗಳಿದ್ದು, 213 ಬೋಧಕ ಮತ್ತು 110 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿ.ವಿ.ಯ ಗುಣಮಟ್ಟ ಶಿಕ್ಷಣ ಅಳತೆಗೆ ಅಲ್ಲಿನ ಬೋಧಕ ಸಿಬ್ಬಂದಿಗಳ ಪ್ರಾಜೆಕ್ಟ್ ಮೇಲೆ ಅವಲಿಂಬಿತವಾಗಿದ್ದು, ತಾವು ಅಧಿಕಾರ ವಹಿಸಿದ್ದಾಗ 100 ಜನ ಇದ್ದ ಸಂಶೋಧನಾ‌ ಅಭ್ಯರ್ಥಿಗಳ‌ ಸಂಖ್ಯೆ ಇದೀಗ‌ 450ಕ್ಕೆ ತಲುಪಿದೆ. ಹೊಸದಾಗಿ ಎರಡು ವಸತಿ ನಿಲಯ ಸ್ಥಾಪಿಸಿದ್ದು, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲಾ ಪೂರಕ ವಾತಾವರಣ ಇಲ್ಲಿ ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಿಂದ ಸಹ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಸೋಮವಾರದಿಂದಲೆ ಪಿ.ಜಿ ಪರೀಕ್ಷೆ ನಡೆಯಲಿದ್ದು, ಮೇ 8ಕ್ಕೆ ಮುಗಿಯಲಿದೆ. ಮೇ ಅಂತ್ಯಕ್ಕೆ ಫಲಿತಾಂಶ ಘೋಷಿಸಲಾಗುವುದು. ವಿ.ವಿ ಕ್ಯಾಂಪಸ್ ನಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅಮರ್ಜಾ ಅಲ್ಲದೆ ಪರ್ಯಾಯ ವ್ಯವಸ್ಥೆಯತ್ತವು ನಾವು ಹೆಜ್ಜೆ ಇಟ್ಟಿದ್ದೇವೆ. ಅಂತರ್ಜಲ್ ಹೆಚ್ಚಳಕ್ಕೆ ಮತ್ತು ಹಸರಿಕರಣಕ್ಕೆ ಆದ್ಯತೆ ನೀಡಿದ್ದು, ಇದಕ್ಕಾಗಿ ಸಿ.ಎಸ್.ಆರ್. ನಿಧಿಯಡಿ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ‌ 4-5 ವರ್ಷದಲ್ಲಿ ಕ್ಯಾಂಪಸ್ ಗಿಡಗಳಿಂದ ತುಂಬಿರಲಿದೆ ಎಂದರು.
24 ಜನರಿಗೆ ಪಿ.ಎಚ್.ಡಿ ಪ್ರದಾನ:
ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಸುಮಾರು 769 ಜನ ಅಭ್ಯರ್ಥಿಗಳು ಒದವಿ ಒಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 197 ಜನ ಪದವಿ, 547 ಜನ ಸ್ನಾತಕೋತ್ತರ ಪದವಿ, 24 ಜನ ಪಿ.ಎಚ್.ಡಿ ಹಾಗು ಓರ್ವ ಅಭ್ಯರ್ಥಿ ಎಂ.ಫಿಲ್ ಪದವಿಗೆ ಅರ್ಹರಾಗಿದ್ದಾರೆ. ಇದರಲ್ಲಿ ಒಟ್ಟಾರೆ 460 ಅಭ್ಯರ್ಥಿಗಳು ಖುದ್ದಾಗಿ ಭಾಗವಹಿಸಿ ಘಟಿಕೋತ್ಸವದ ಪ್ರಮಾಣ ಪತ್ರ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದಂತೆ ಆಯಾ‌ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ 22 ಜನರಿಗೆ ಚಿನ್ನದ ಪದಕ‌ ನೀಡಲಾಗುತ್ತಿದ್ದು, ಮಧ್ಯಪ್ರದೇಶ‌ ಮೂಲದ ಬಿ.ಟೆಕ್‌ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ಸ್ & ಇಂಜಿನೀಯರಿಂಗ್ ವಿದ್ಯಾರ್ಥಿ ದಿವ್ಯಾಂಶು ಸಕ್ಸೇನಾ ಅವರು ಪ್ರೊ. ಎ.ಎಂ.ಪಠಾನ್ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಬುಧವಾರ ಜರುಗುವ ಘಟಿಕೋತ್ಸವದಲ್ಲಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ‌ ಮಾಡಲಾಗುತ್ತದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.
ಸಂಶೋಧನೆಗೆ 80 ಲಕ್ಷ ರೂ. ಅನುದಾನ ಬಿಡುಗಡೆ:
ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯು ವಿವಿಧ 7 ವಿಷಯಗಳ ಮೇಲೆ ಸಂಶೋಧನೆ ಕೈಗೊಳ್ಳಲು ವಿವಿಗೆ 80 ಲಕ್ಷ ರೂ. ಅನುದಾನ ನೀಡಿದ್ದು, ಇದು
ಸಿ‌.ಯು.ಕೆ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.
ಡಾ. ಗಣಪತಿ ಬಿ. ಸಿನ್ನೂರ ಅವರ “ಭಾರತೀಯ ಜ್ಞಾನ ವ್ಯವಸ್ಥೆಯ ಮೂಲಕ ನಿರ್ವಹಣಾ ಚಿಂತನೆಯನ್ನು ಬಲಪಡಿಸುವುದು: ವಚನ ಸಾಹಿತ್ಯ ಮತ್ತು ಭಾರತೀಯ ಸಂಸ್ಥೆಗಳ ಅಧ್ಯಯನ”, ಡಾ. ಅಲೋಕ್ ಕುಮಾರ್ವ್ ಗೌರವ್ ಅವರ “ಪ್ರಜಾಪ್ರಭುತ್ವದ ತಳಮಟ್ಟದಲ್ಲಿ ಆಡಳಿತ: ಭಾರತದ ಚುನಾವಣಾ ವ್ಯವಸ್ಥೆಯ ಬೀದಿ ಮಟ್ಟದ ಅಧಿಕಾರಶಾಹಿಯ ಪ್ರಾಯೋಗಿಕ ಅಧ್ಯಯನ” ಹಾಗೂ
ಡಾ. ಜೋಮಿಯರ್ ಬಾಗ್ರಾ ಅವರ “ಡಿಜಿಟಲ್ ಸೇತುವೆಗಳು, ಸ್ಥಿತಿಸ್ಥಾಪಕ ಮನಸ್ಸುಗಳು: ಅರುಣಾಚಲ ಪ್ರದೇಶದ ಬುಡಕಟ್ಟು ಯುವಕರಲ್ಲಿ ಡಿಜಿಟಲ್ ಯೋಗಕ್ಷೇಮ ಮತ್ತು ಸಾಂಸ್ಕೃತಿಕ ಗುರುತಿನ ಪೋಷಣೆ” ಈ ಮೂರು ಎರಡು ವರ್ಷದ ಅವಧಿಯ ಸಂಶೋಧನೆಗೆ ತಲಾ 16 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.
ಅದೇ ರೀತಿಯಲ್ಲಿ ಡಾ. ಮಲ್ಲಿಕಾರ್ಜುನ ಹೂಗರ ಅವರ “ಸಾಂವಿಧಾನಿಕ ಭರವಸೆಯಿಂದ ಆಡಳಿತ ಅಭ್ಯಾಸದವರೆಗೆ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರ್ಟಿಕಲ್ 371ಎ ನ ಕಾರ್ಯಕ್ಷಮತೆಯ ಕುರಿತು ನಾಗರಿಕ ದೃಷ್ಟಿಕೋನಗಳು”,
ಡಾ. ಸಫಿಯಾ ಪರ್ವೀನ ಅವರ “ಸಮಗ್ರ ಬೆಳವಣಿಗೆಗಾಗಿ ಕೃಷಿ-ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳು ಮತ್ತು ಕೃತಕ ಬುದ್ಧಿಮತ್ತೆ: ವಿಕಸಿತ ಭಾರತದತ್ತ ಕೆಕೆಆರ್‌ನ ರೈತರನ್ನು ಸಬಲೀಕರಣಗೊಳಿಸುವುದು",
ಡಾ. ರೆಮ್ಯಾ ವಿ ಪಿ ಅವರ “ಹಿಂದೂ ದೇವಾಲಯದ ಸ್ಥಳೀಯ ಕಟ್ಟಡ ಜ್ಞಾನದಲ್ಲಿ ವೇಸರ ಶೈಲಿಯ ವಾಸ್ತುಶಿಲ್ಪದ ವಾಸ್ತು ವಿದ್ಯೆಯನ್ನು ಅನ್ವೇಷಿಸುವುದು ಹಾಗೂ
ಡಾ. ರೂಪಾ ರಾಣಿ ಸೋನೋವಾಲ್ ಅವರ “ಮೇಘಾಲಯದಲ್ಲಿ ಮಹಿಳೆಯರ ನೇತೃತ್ವದ ಸಾಂಪ್ರದಾಯಿಕ ಪರಿಸರ ಜ್ಞಾನ (TEK) ಆಧಾರಿತ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಸಾಮಾಜಿಕ ಮಾಧ್ಯಮ ಪಾತ್ರ” ಕುರಿತು ತಲಾ ಒಂದು ವರ್ಷದ ಅವಧಿಯ ಮೈಕ್ರೋ ಸಂಶೋಧನೆಗೆ ತಲಾ 8 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಭರತ ಕುಮಾರ್, ಸಹಾಯಕ ರಿಜಿಸ್ಟರ್ ಶ್ರವಣ, ಪಿ.ಆರ್.ಓ ಡಾ. ಗಣಪತಿ ಸಿನ್ನೂರ, ಎ.ಪಿ.ಆರ್.ಓ ಡಾ.ಪ್ರಕಾಶ ಬಾಳಿಕಾಯಿ, ಡಾ. ಸಾಯಿಕೃಷ್ಣ, ಡಾ. ಶಾಮಲಾ, ಪ್ರೋ. ಬಸವರಾಜ ಕುಪ್ಪಕಡಿ, ಡಾ.ಜೋಹೆರ್, ಡಾ.ಶ್ರೀಲಕ್ಷ್ಮೀ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net