

ಪ್ರಮುಖ ಮುಖ್ಯಾಂಶಗಳು
ಮನೆ ಭೋಗ್ಯದ ಹೆಸರಿನಲ್ಲಿ ಅಮಾಯಕರಿಂದ ಕೋಟ್ಯಂತರ ರೂ. ಪಡೆದಿರುವ ಇನ್ನೊಂದು ಬೃಹತ್ ವಂಚನೆ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಇತ್ತ ಮನೆಯೂ ಇಲ್ಲದೆ ಅತ್ತ ಕೊಟ್ಟ ಹಣವೂ ವಾಪಸ್ ಆಗದೆ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅರ್ಬನ್ ಸ್ಟಾಂಜ್ ಎಂಬ ಖಾಸಗಿ ಕಂಪನಿಯು ಮೊಬೈಲ್ ಆಪ್ ಹಾಗೂ ಇನ್ಸ್ಟಾಗ್ರಾಂ ಸೇರಿ ವಿವಿಧ ಬಗೆಯ ಜಾಲತಾಣಗಳ ಮೂಲಕ ಅಮಾಯಕರನ್ನು ಸಂರ್ಪಸಿ, ಮನೆ ಭೋಗ್ಯಕ್ಕೆ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂ. ವಂಚಿಸಿದೆ. ಸದ್ಯ 7 ಮಂದಿ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಮೇ 9ರಂದು ದೂರು ದಾಖಲಿಸಿದ್ದಾರೆ. ಬರೋಬ್ಬರಿ 1.09 ಕೋಟಿ ರೂ. ಬರಬೇಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ನೂರಾರು ಮಂದಿಗೆ ಇದೇ ರೀತಿ ಮೋಸ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಂಪನಿ ಮಾಲೀಕ ನಿತೀನ್ ಹೊನ್ನೇಗೌಡ, ಸಿಬ್ಬಂದಿಯಾದ ಮದನ್ರಾಜ್ ಹಾಗೂ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೈತ್ರಿ ಲೇಔಟ್ ನಿವಾಸಿ ಕಲೀದ್ ಅಲಿ ಖಾನ್ ಎಂಬುವರಿಗೆ 17 ಲಕ್ಷ ರೂ., ಹೈದರಾಬಾದ್ ಮೂಲದ ಬರ್ಕತ್ ಉನ್ನೀಸಾಗೆ 27 ಲಕ್ಷ ರೂ., ದೊಡ್ಡಕಲ್ಲಸಂದ್ರದ ಸ್ಟಾ್ಯನ್ಲೀ ಜಾರ್ಜ್ಗೆ 22 ಲಕ್ಷ ರೂ., ಸಬ್ಸ್ಟೈನ್ ರಾಜನ್ಗೆ 19 ಲಕ್ಷ ರೂ., ಬೊಮ್ಮನಹಳ್ಳಿಯ ಖುಷ್ಬು ಬೇಗಂಗೆ 11 ಲಕ್ಷ ರೂ. ಹಾಗೂ ಹೊಂಗಸಂದ್ರದ ಮಂಜುಳಾ ಜಗದೀಶ್ ಎಂಬುವರಿಗೆ 13 ಲಕ್ಷ ರೂ. ವಂಚಿಸಿರುವ ಬಗ್ಗೆ ಎಫ್ಐಆರ್ನಲ್ಲಿ ನಮೂದಿಸಲಾಗಿದೆ.
ಸಾಲದ ಸುಳಿಯಲ್ಲಿ ಸಂತ್ರಸ್ತರು: ವಂಚಕರಿಗೆ ಹಣ ನೀಡುವಾಗ ಪತ್ನಿಯ ಮಾಂಗಲ್ಯ ಸರವನ್ನು ಬ್ಯಾಂಕ್ನಲ್ಲಿ ಅಡವಿಟ್ಟಿದ್ದಾರೆ. ಕೆಲವರು ಸ್ನೇಹಿತರ ಬಳಿ ಸಾಲವಾಗಿ ಸ್ವೀಕರಿಸಿದ್ದಾರೆ. ಇನ್ನು ಕೆಲವರು ಬ್ಯಾಂಕಿನಲ್ಲಿ ಸಾಲ ಮಾಡಿ ವಂಚಕರಿಗೆ ಲಕ್ಷಾಂತರ ರೂ. ನೀಡಿದ್ದಾರೆ.
ಲೀಸ್ಗೆ ಮನೆ ಹುಡುಕುವ ಅಮಾಯಕರನ್ನು ಗುರಿಯಾಗಿಸಿ ಅವರಿಂದ ಲಕ್ಷಾಂತರ ರೂ.ಗಳನ್ನು ಸ್ವೀಕರಿಸುವ ವಂಚಕರು ಮೊದಲು ಆರು ತಿಂಗಳು ಸಕಾಲಕ್ಕೆ ಬಾಡಿಗೆ ಪಾವತಿಸುತ್ತಾರೆ. ಬಳಿಕ ನಿಲ್ಲಿಸುತ್ತಾರೆ. ಆಗ ಮನೆ ಮಾಲೀಕರು, ಸಂತ್ರಸ್ತರಿಗೆ ಬಾಡಿಗೆ ಪಾವತಿಸಿ ಇಲ್ಲವೇ ಮನೆ ಖಾಲಿ ಮಾಡಿ ಎನ್ನುತ್ತಾರೆ. ಮನೆ ಕೊಡಿಸಿದವರನ್ನು ಸಂರ್ಪಸಿ, ಅವರ ಕಚೇರಿಗೆ ಹೋದರೆ ಅವಾಚ್ಯ ಶಬ್ದದಿಂದ ನಿಂದಿಸಿ, ‘ಹಣ ಕೊಡಲ್ಲ. ಏನು ಮಾಡ್ಕೊಳ್ತೀರಿ’ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದು ದುಡಿಮೆ ಮಾಡಿ ನಾಲ್ಕು ಕಾಸು ಸಂಪಾದಿಸಿಕೊಂಡು ಮರಳಿ ಊರಿಗೆ ಹೋಗಬೇಕು ಎಂದು ಕನಸು ಕಂಡಿದ್ದ ಕುಟುಂಬಗಳು ವಂಚನೆಯ ಜಾಲದಲ್ಲಿ ಸಿಲುಕಿವೆ. ವಂಚಕರು ಕೇವಲ 7 ಜನರಿಂದ 1 ಕೋಟಿ ರೂ.ಗಳಿಗೂ ಅಧಿಕ ಹಣ ಲಪಟಾಯಿಸಿದ್ದಾರೆ. ಮರ್ಯಾದೆಗೆ ಅಂಜಿ ದೂರು ನೀಡದವರು ಹಾಗೂ ಇವರ ಬಣ್ಣದ ಮಾತಿಗೆ ಹಣ ಕೊಡುತ್ತಾರೆಂದು ನಂಬಿ ಠಾಣೆ ಮೆಟ್ಟಿಲೇರದೆ ಇರುವವರು ನೂರಾರು ಜನರಿದ್ದು, ಇವರೆಲ್ಲರಿಂದ ನೂರಾರು ಕೋಟಿ ರೂ. ವಂಚನೆ ಮಾಡಿರಬಹುದೆಂದು ಪೊಲೀಸ್ ಮೂಲಗಳು ಅನುಮಾನ ವ್ಯಕ್ತಪಡಿಸಿವೆ.
ಬೆಂಗಳೂರು ನಗರದಲ್ಲಿ ಲೀಸ್ ಹಾಗೂ ಬಾಡಿಗೆಗೆ ಮನೆ ಕೊಡಿಸುವುದಾಗಿ ವಿವಿಧ ಹೆಸರಿನ ಕಂಪನಿಗಳು ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚಿಸಿವೆ. ಈ ಪೈಕಿ ವ್ಯಕ್ತಿಯೊಬ್ಬರು ತಾವು ಮೋಸ ಹೋಗಿರುವು ದಾಗಿ ಇಂದಿರಾನಗರ ಠಾಣೆಗೆ ಮೇ 11ರಂದು ದೂರು ಸಲ್ಲಿಸಿದ್ದರು. ತನಿಖೆ ವೇಳೆ ನೂರಾರು ಕೋಟಿ ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು. ಇಂತಹದೇ ಮತ್ತೊಂದು ಪ್ರಕರಣ ಆವಲಹಳ್ಳಿ ಠಾಣೆಯಲ್ಲೂ ದಾಖಲಾಗಿತ್ತು.