ವರ್ಕ್​ಫ್ರಮ್​ ಹೋಂ ಹೆಸರಲ್ಲಿ SLV ಮಹಿಳಾ ಮಾರ್ಟ್‌ನಿಂದ ಕೋಟ್ಯಂತರ ರೂ. ವಂಚನೆ! ಪೊಲೀಸ್​ ಠಾಣೆ ಮೆಟ್ಟಿಲೇರಿದ ನೊಂದ ಮಹಿಳೆಯರು

ವಂಚನೆಯಿಂದ ನೊಂದ ಮಹಿಳೆಯರು
ವಂಚನೆಯಿಂದ ನೊಂದ ಮಹಿಳೆಯರು
Published on

ಪ್ರಮುಖ ಮುಖ್ಯಾಂಶಗಳು

  • ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ
  • ಕೋಟ್ಯಂತರ ರೂ. ಡೆಪಾಸಿಟ್ ಪಡೆದು ವಂಚಿಸಿದ ಆರೋಪ
  • ನ್ಯಾಯ ಕೊಡಿಸುವಂತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ನೊಂದ ಮಹಿಳೆಯರು
ಹಾವೇರಿ: ಅಶ್ವಿನಿ ನಗರದಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರೆದು, ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ನೂರಾರು ಮಹಿಳೆಯರಿಂದ ಕೋಟ್ಯಂತರ ರೂ. ಡೆಪಾಸಿಟ್ ಪಡೆದು ವಂಚಿಸಿ, ಪರಾರಿಯಾಗಿದ್ದಾರೆಂದು ಆರೋಪಿಸಿ ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ನಗರದ ಶಹರ ಪೊಲೀಸ್ ಠಾಣೆ ಎದುರು ಮಂಗಳವಾರ ಜಮಾಯಿಸಿದ್ದ ನೊಂದ ಮಹಿಳೆಯರು ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದರು. ಹಾವೇರಿ ತಾಲೂಕು ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎಂಬಾತ ಕೋಟ್ಯಂತರ ರೂಪಾಯಿ ವಂಚಿಸಿರುವ ವಂಚಕ ಸದ್ಯ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಿ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ, ಇತರೆ ಸಾಮಗ್ರಿಗಳನ್ನು ಕೊಡುತ್ತೇವೆ. ನೀವು ಅದನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿಕೊಡಬೇಕು. ರಾಜ್ಯದಲ್ಲಿ ನಮ್ಮದು 9 ಶಾಖೆಗಳಿವೆ, ಕನಿಷ್ಠ 25 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಡೆಪಾಸಿಟ್ ಇಡಬೇಕು. ಒಂದು ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಕೊಡುತ್ತೇವೆ ಎಂದು ನಂಬಿಸಿದ್ದರು. ನಾನು ಮೊದಲು ಒಂದು ಲಕ್ಷ ರೂ. ಡೆಪಾಸಿಟ್ ಮಾಡಿದ್ದೆ. ನಾಲ್ಕೈದು ತಿಂಗಳು ಹಣ ಕೊಟ್ಟರು. ನಂತರ ಮತ್ತೆ ಎರಡು ಲಕ್ಷ ರೂ. ಪಾವತಿಸಿದ್ದೆ. ಆಗ ಒಂದು ರೂಪಾಯಿಯೂ ಕೊಡದೇ ವಂಚಿಸಿದ್ದಾರೆ ಎಂದು ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯ ಶಂಕ್ರಮ್ಮ ಅಳಲು ತೋಡಿಕೊಂಡಿದ್ದಾರೆ.

ಅಂದಾಜು 10 ಕೋಟಿ ರೂ. ವಂಚನೆ

ಈ ಸಂಸ್ಥೆಯಿಂದ ಅಂದಾಜು 8ರಿಂದ 10 ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. ನೊಂದವರಿಗೆ ನ್ಯಾಯ ಕೊಡಿಸುವಂತೆ ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ ಎಂದು ಬ್ಯಾಡಗಿ ವಕೀಲ ನವೀನ ಮುಳಗುಂದ ಹಾಗೂ ಮಂಜುನಾಥ ಅರಳಿಕಟ್ಟಿ ತಿಳಿಸಿದರು. ಆರೋಪಿ ವಿನಾಯಕ ಆನ್ವೇರಿಯನ್ನು ಕೂಡಲೇ ಬಂಧಿಸಿ, ನೊಂದವರಿಗೆ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ದಾಖಲೆ ಸಮೇತ ದೂರು ನೀಡುವಂತೆ ತಿಳಿಸಿದ್ದು, ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net