ಮನೆ ಭೋಗ್ಯ ಹೆಸರಲ್ಲಿ ಕೋಟಿ ಕೋಟಿ ಲೂಟಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಜಧಾನೀಲಿ ಮತ್ತೊಂದು ಬೃಹತ್ ವಂಚನೆ ಬೆಳಕಿಗೆ
  • ಲೀಸ್‌ಗೆ ಹುಡುಕುವವರೇ ವಂಚಕರ ಟಾರ್ಗೆಟ್
  • ಸಂತ್ರಸ್ತರು ಕಚೇರಿಗೆ ಹೋದರೆ ಬೆದರಿಕೆ

ಸುನೀಲ್ ಹರಿಹರ 

ಬೆಂಗಳೂರು: ಮನೆ ಭೋಗ್ಯದ ಹೆಸರಿನಲ್ಲಿ ಅಮಾಯಕರಿಂದ ಕೋಟ್ಯಂತರ ರೂ. ಪಡೆದಿರುವ ಇನ್ನೊಂದು ಬೃಹತ್ ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇತ್ತ ಮನೆಯೂ ಇಲ್ಲದೆ, ಅತ್ತ ಕೊಟ್ಟ ಹಣವೂ ವಾಪಸ್ಸಾಗದೆ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 
ಅರ್ಬನ್ ಸ್ಟಾಂಜ್ ಎಂಬ ಖಾಸಗಿ ಕಂಪನಿಯು ಮೊಬೈಲ್ ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಸೇರಿ ವಿವಿಧ ಬಗೆಯ ಜಾಲತಾಣಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ, ಮನೆ ಭೋಗ್ಯಕ್ಕೆ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂ. ವಂಚಿಸಿದೆ. ಸದ್ಯ 7 ಮಂದಿ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಮೇ 9ರಂದು ದೂರು ದಾಖಲಿಸಿದ್ದು, ಬರೋಬ್ಬರಿ 1.09 ಕೋಟಿ ರೂ. ಬರಬೇಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ನೂರಾರು ಮಂದಿಗೆ ಇದೇ ರೀತಿ ಮೋಸ ಹೋಗಿದ್ದಾರೆ ಎಂದು ಗೊತ್ತಾಗಿದೆ. 
ಕಂಪನಿ ಮಾಲೀಕ ನಿತೀನ್ ಹೊನ್ನೇಗೌಡ, ಸಿಬ್ಬಂದಿಯಾದ ಮದನ್‌ರಾಜ್ ಹಾಗೂ ಶಿವಕುಮಾರ್ ವಿರುದ್ಧ ಎ್ಐಆರ್ ದಾಖಲಾಗಿದೆ. ಮೈತ್ರಿ ಲೇಔಟ್ ನಿವಾಸಿ ಕಲೀದ್ ಅಲಿ ಖಾನ್ ಎಂಬುವರಿಗೆ 17 ಲಕ್ಷ ರೂ., ಹೈದರಾಬಾದ್ ಮೂಲದ ಬರ್ಕತ್ ಉನ್ನಿಸಾಗೆ 27 ಲಕ್ಷ ರೂ., ದೊಡ್ಡಕಲ್ಲಸಂದ್ರದ ಸ್ಟಾೃನ್ಲೀ ಜಾರ್ಜ್‌ಗೆ 22 ಲಕ್ಷ ರೂ., ಸಬ್‌ಸ್ಟೈನ್ ರಾಜನ್‌ಗೆ 19 ಲಕ್ಷ ರೂ., ಬೊಮ್ಮನಹಳ್ಳಿಯ ಖುಷ್ಬು ಬೇಗಂಗೆ 11 ಲಕ್ಷ ರೂ. ಹಾಗೂ ಹೊಂಗಸಂದ್ರದ ಮಂಜುಳಾ ಜಗದೀಶ್ ಎಂಬುವರಿಗೆ 13 ಲಕ್ಷ ರೂ. ವಂಚಿಸಿರುವ ಬಗ್ಗೆ ಎ್ಐಆರ್‌ನಲ್ಲಿ ನಮೂದಿಸಲಾಗಿದೆ. 

ಸಾಲದ ಸುಳಿಯಲ್ಲಿ ಸಂತ್ರಸ್ತರು:

ವಂಚಕರಿಗೆ ಹಣ ನೀಡುವಾಗ ಪತ್ನಿಯ ಮಾಂಗಲ್ಯ ಸರ ಬ್ಯಾಂಕಿನಲ್ಲಿ ಅಡವಿಟ್ಟಿದ್ದಾರೆ. ಕೆಲವರು ಸ್ನೇಹಿತರ ಬಳಿ ಸಾಲವಾಗಿ ಸ್ವೀಕರಿಸಿದ್ದಾರೆ. ಇನ್ನು ಕೆಲವರು ಬ್ಯಾಂಕಿನಲ್ಲಿ ಸಾಲ ಮಾಡಿ ವಂಚಕರಿಗೆ ಲಕ್ಷಾಂತರ ರೂ. ಹಣ ನೀಡಿದ್ದಾರೆ.

ನೂರಾರು ಕೋಟಿ ವಂಚನೆ ಶಂಕೆ?

ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದು ದುಡಿಮೆ ಮಾಡಿ ನಾಲ್ಕು ಕಾಸು ಸಂಪಾದಿಸಿಕೊಂಡು ಮರಳಿ ಊರಿಗೆ ಹೋಗಬೇಕು ಎಂದು ಕನಸು ಕಂಡಿದ್ದ ಕುಟುಂಬಗಳ ವಂಚನೆಯ ಜಾಲದಲ್ಲಿ ಸಿಲುಕಿದ್ದಾರೆ. ವಂಚಕರು ಕೇವಲ 7 ಜನರಿಂದ 1 ಕೋಟಿ ರೂ.ಗಳಿಗೂ ಅಧಿಕ ಹಣ ಲಪಟಾಯಿಸಿದ್ದಾರೆ. ಮರ್ಯಾದೆಗೆ ಅಂಜಿ ದೂರು ನೀಡದವರು ಹಾಗೂ ಇವರ ಬಣ್ಣದ ಮಾತಿಗೆ ಹಣ ಕೊಡುತ್ತಾರೆಂದು ನಂಬಿ ಠಾಣೆ ಮೆಟ್ಟಿಲೇರದೆ ಇರುವವರು ನೂರಾರು ಜನರಿದ್ದು, ಇವರೆಲ್ಲರಿಂದ ನೂರಾರು ಕೋಟಿ ವಂಚನೆ ಮಾಡಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯೂ ಇಲ್ಲ, ಹಣವೂ ಇಲ್ಲ

ಲೀಸ್‌ಗೆ ಮನೆ ಹುಡುಕುವ ಅಮಾಯಕರನ್ನು ಗುರಿಯಾಗಿಸಿ ಅವರಿಂದ ಲಕ್ಷಾಂತರ ರೂ.ಗಳನ್ನು ಸ್ವೀಕರಿಸುವ ವಂಚಕರು ಮೊದಲು ಆರು ತಿಂಗಳು ಸಕಾಲಕ್ಕೆ ಬಾಡಿಗೆ ಪಾವತಿಸುತ್ತಾರೆ. ಬಳಿಕ ನಿಲ್ಲಿಸುತ್ತಾರೆ. ಆಗ ಮನೆ ಮಾಲೀಕರು, ಸಂತ್ರಸ್ತರಿಗೆ ಬಾಡಿಗೆ ಪಾವತಿಸಿ ಇಲ್ಲವೆ ಮನೆ ಖಾಲಿ ಮಾಡಿ ಎನ್ನುತ್ತಾರೆ. ಮನೆ ಕೊಡಿಸಿದವರನ್ನು ಸಂಪರ್ಕಿಸಿ, ಅವರ ಕಚೇರಿಗೆ ಹೋದರೆ ಅವಾಚ್ಯ ಶಬ್ದದಿಂದ ನಿಂದಿಸಿ, ‘ಹಣ ಕೊಡಲ್ಲ. ಏನು ಮಾಡ್ಕೊಳ್ತೀರಿ’ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಇಂದಿರಾನಗರ, ಆವಲಹಳ್ಳಿಯಲ್ಲೂ ಕೇಸ್ 

ಬೆಂಗಳೂರು ನಗರದಲ್ಲಿ ಲೀಸ್ ಹಾಗೂ ಬಾಡಿಗೆಗೆ ಮನೆ ಕೊಡಿಸುವುದಾಗಿ ವಿವಿಧ ಹೆಸರಿನ ಕಂಪನಿಗಳು ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚಿಸಿವೆ. ಈ ಪೈಕಿ ವ್ಯಕ್ತಿಯೊಬ್ಬರು ತಾವು ಮೋಸ ಹೋಗಿರುವುದಾಗಿ ಇಂದಿರಾನಗರ ಠಾಣೆಗೆ ಮೇ 11ರಂದು ದೂರು ಸಲ್ಲಿಸಿದ್ದರು. ತನಿಖೆ ವೇಳೆ ನೂರಾರು ಕೋಟಿ ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು. ಇಂತಹದೇ ಮತ್ತೊಂದು ಪ್ರಕರಣ ಆವಲಹಳ್ಳಿ ಠಾಣೆಯಲ್ಲೂ ದಾಖಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net