ರೈತರ ಖಾತೆಗೆ ಕೂಡಲೇ ಬೆಳೆ ವಿಮೆ ಪರಿಹಾರ ಜಮೆ ಮಾಡಬೇಕು ಎಂದು ಒತ್ತಾಯಿಸಿ ಮಳಖೇಡದಲ್ಲಿ ರಾಜ್ಯ ರೈತ ಸಂಘದಿಂದ ಕಲಬುರಗಿ& ಸೇಡಂ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಶಾಂತಕುಮಾರ ಚನ್ನಕ್ಕಿ, ಅಶೋಕ ಬಂಡಿ, ಶರಣು ಅವಂಟಿ, ಚಂದ್ರು ಮರಗೋಳ, ನಾಗೇಂದ್ರಪ್ಪ ಕುಕ್ಕುಂದಾ, ಚಂದ್ರಕಾಂತ ತೊಟ್ನಳ್ಳಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಳಖೇಡದಲ್ಲಿ ರೈತ ಸಂಘದಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಹೋರಾಟ
ಮಳಖೇಡ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರ ಖಾತೆಗೆ ಈವರೆಗೂ ಬೆಳೆವಿಮೆ ಪರಿಹಾರ ಬಂದಿಲ್ಲ, ಇದರಿಂದ ಅನ್ನದಾತರು ಸಂಕಷ್ಟದಲ್ಲಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಕಲಬುರಗಿ& ಸೇಡಂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಮಾತನಾಡಿ, ಮಳಖೇಡ ಹೊರತು ಪಡಿಸಿ ಸೇಡಂ ತಾಲೂಕಿನ ಎಲ್ಲ ಗ್ರಾಮಗಳಿಗೆ ಬೆಳೆವಿಮೆ ಪರಿಹಾರ ಬಂದಿದೆ. ಇಲ್ಲಿ ಮಾತ್ರ ವಿಮೆ ಪರಿಹಾರ ಕೊಡದೆ ಕಂಪನಿ ಹಾಗೂ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ವಿಮೆ ಮಾಡಿಸಲು ಅವಧಿ ನೀಡುವ ಕಂಪನಿ ದುಡ್ಡು ಹಾಕುವಾಗ ಅವಧಿ ಮೀರುವುದು ಯಾವ ನ್ಯಾಯ ? ಬೆಳೆ ಕಳೆದುಕೊಂಡು ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ಕೂಡಲೇ ಖಾತೆಗೆ ಹಣ ಜಮೆ ಮಾಡಬೇಕು. ರ್ನಿಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆದ್ದಾರಿಯಲ್ಲಿ ಹೋರಾಟಕ್ಕೆ ಕುಳಿತಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳು ಹೋರಾಟಗಾರರ ಮನವೊಲಿಸುವ ಕೆಲಸ ಮಾಡಿದರು. ಆದರೆ ವಿಮೆ ಕಂಪನಿ ಅಥವಾ ಸರ್ಕಾರದ ಪ್ರಮುಖ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಭರವಸೆ ನೀಡುವವರೆಗೂ ಹೋರಾಟ ಕೈಬಿಡಲ್ಲ ಎಂದು ಪಟ್ಟು ಹಿಡಿದರು.
ಕೃಷಿ ಇಲಾಖೆ ಸೇಡಂ ಉಪ ವಿಭಾಗದ ಉಪ ನಿರ್ದೇಶಕಿ ಅನುಸೂಯಾ ಹೂಗಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, 15 ದಿನಗಳೊಳಗಾಗಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆ ಮಾಡಿಸುವುದಾಗಿ ಭರವಸೆ ನೀಡಿದರು. ಬಳಿಕ ಹೋರಾಟ ಕೈಬಿಡಲಾಯಿತು.
ಗ್ರಾಮಟಕದ ಗೌರವಾಧ್ಯಕ್ಷ ಅಶೋಕ ಬಂಡಿ, ಅಧ್ಯಕ್ಷ ಶರಣು ಅವಂಟಿ, ಕಾರ್ಯದರ್ಶಿ ಚಂದ್ರು ಮರಗೋಳ, ಪ್ರಮುಖರಾದ ನಾಗೇಂದ್ರಪ್ಪ ಕುಕ್ಕುಂದಾ, ಚಂದ್ರಕಾಂತ ತೊಟ್ನಳ್ಳಿ, ವಿಶ್ವನಾಥ ಗುತ್ತೇದಾರ್, ಸುಧಾಕರ ನಾಗೊಂಡ ಇತರರಿದ್ದರು.
ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ, ಪಿಎಸ್ಐ ಶರಣಪ್ಪ ಜಾಕನಳ್ಳಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.
ಮೂರು ಗಂಟೆ ಸಂಚಾರ ಸ್ತಬ್ಧ
ಬೆಳೆ ವಿಮೆ ಪರಿಹಾರ ವಿತರಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂದಿಂದ ಮಳಖೇಡದಲ್ಲಿ ಕಲಬುರಗಿ -ಸೇಡಂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದಿದ್ದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ಬೆಳಗ್ಗೆ 10.45ಕ್ಕೆ ಶುರುವಾದ ಪ್ರತಿಭಟನೆ ಮಧ್ಯಾಹ್ನ 1.45ರವರೆಗೆ ನಡೆಯಿತು. ಹೋರಾಟ ಮಧ್ಯೆಯೂ ರೈತರು ಆಂಬುಲೆನ್ಸ್ ಹಾಗೂ ಕಾರಿನಲ್ಲಿ ಹೊರಟಿದ್ದ ರೋಗಿಗಳು ಸಾಗುವುದಕ್ಕೆ ಅವಕಾಶ ಮಾಡಿಕೊಟ್ಟರು. ಸುಮಾರು ಮೂರು ಗಂಟೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ರಸ್ತೆಯ ಎರಡು ಮಾರ್ಗದಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿದ್ದವು. ಪ್ರತಿಭಟನೆ ಮುಗಿಯುತ್ತಿದ್ದಂತೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.