ಮಹಿಳೆಯರಲ್ಲಿ ಸುರಕ್ಷತಾ ಭಾವ ಮೂಡಿಸಿ

ವಿಜಯಪುರ ಜಿಲ್ಲಾಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು. ಡಿಎಚ್‌ಒ ಡಾ. ಮಲ್ಲನಗೌಡ ಬಿರಾದಾರ, ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಇತರರಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು. ಡಿಎಚ್‌ಒ ಡಾ. ಮಲ್ಲನಗೌಡ ಬಿರಾದಾರ, ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿಕೆ
  • ಜಿಲ್ಲಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ ಸಭೆ

ವಿಜಯಪುರ: ಪಾಶ್ ಕಾಯ್ದೆ ಇಡೀ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ. ಈ ಕಾಯ್ದೆಯ ಉದ್ದೇಶ ಸಫಲಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಚೌಧರಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ  ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ‘ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಟೆಲ್, ರೆಸಾರ್ಟ್ ಮತ್ತಿತರ ಕಡೆಗಳಲ್ಲಿ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಪಾಶ್ ಕಾರ್ಯ ನಿರ್ವಹಿಸುವಂತಾಗಲಿ. ತನ್ಮೂಲಕ ಮಹಿಳೆಯರಿಗೆ ಸುರಕ್ಷತಾ ಭಾವ ಮೂಡಿಸಲು ಎಲ್ಲರೂ ಕೈಜೋಡಿಸಬೇಕು. ಆಗಾಗ ಪಾಶ್ ತರಬೇತಿ ಆಯೋಜಿಸಬೇಕು ಎಂದರು.
‘ಎಲ್ಲ ವಸತಿ ನಿಲಯಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಸೌಲಭ್ಯ ಒದಗಿಸಿರುವುದನ್ನು ಕಾಲಕಾಲಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ’ ಎಂದು ಅಧಿಕಾರಿಗಳು ವಿವರಿಸಿದರು. 
ಆಗ ಮಧ್ಯೆ ಪ್ರವೇಶಿಸಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, ‘ವಸತಿ ನಿಲಯಗಳಲ್ಲಿ ಬಾಲಕಿಯರಿಗಾಗಿ ಬೇಡಿಕೆ ಬಂದಾಗ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಒದಗಿಸಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು. ಜೊತೆಗೆ ವಸತಿ ನಿಲಯದಲ್ಲಿ ಮೆನು ಪ್ರಕಾರ ಆಹಾರ ಒದಗಿಸಬೇಕು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಿರುವ ಅಂಗನವಾಡಿಗಳಲ್ಲಿ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಕೇಂದ್ರಗಳಿಗೆ ಭೇಟಿ ನೀಡಬೇಕು. ಅಂಗನವಾಡಿಗಳಲ್ಲಿ ಸಮರ್ಪಕ ಪೌಷ್ಟಿಕ ಆಹಾರ ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಿ, ಎಲ್ಲೆಲ್ಲಿ ತೊಂದರೆ ಇದೆಯೋ ಅಲ್ಲಿ ಪರಿಶೀಲಿಸುವ ಮೂಲಕ ಜನರಿಗೆ ಶುದ್ಧ ನೀರು ಸರಬರಾಜು ಮಾಡಬೇಕು ಎಂದರು.
ಕೆರೆಗಳಿಗೆ ನೀರು ಹರಿಸಿ: ಪಾಂಗ್ರೂನ್ ದೊಡ್ಡಿಯಲ್ಲಿ ವಾಸವಾಗಿರುವ ಜನರು ಹಾಗೂ ಸುತ್ತಲಿನವರಿಗೆ ಆ ಭಾಗದಲ್ಲಿರುವ ಕೆರೆಗಳಿಗೆ ನೀರು ಹರಿಸಿ, ಕುರಿಗಳಿಗೆ ಕುಡಿಯಲು ನೀರು ಕಲ್ಪಿಸಲು ಅನುಕೂಲ ಮಾಡಿಕೊಡಿ.  ಸರ್ಕಾರದ ಯೋಜನೆಗಳ ಬಗ್ಗೆ ಅಲ್ಲಿನ ಜನತೆಗೆ ತಿಳಿವಳಿಕೆ ನೀಡಬೇಕು. ಅಲ್ಲಿನ ಜನರಿಗೆ ಸಾರಿಗೆ ಸೌಕರ್ಯ ಕಲ್ಪಿಸಬೇಕು. 
ದೊಡ್ಡಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದ ಅವರು, ಒಟ್ಟಾರೆ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಅಕ್ರಮ ಮದ್ಯ ಮಾರಾಟದ ಕುರಿತು ಪ್ರಕರಣ ದಾಖಲಿಸುವ ಮೂಲಕ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ಬಳಿಕ, ಮಹಿಳೆಯರ ಕುಂದು ಕೊರತೆಯನ್ನು ಸಹಾನುಭೂತಿಯಿಂದ ಆಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿದರು.
ಡಿಸಿ ಡಾ. ಆನಂದ ಕೆ., ಜಿ.ಪಂ. ಸಿಇಒ ರಿಷಿ ಆನಂದ, ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷಕುಮಾರ ಎಚ್.  ಮತ್ತಿತರರಿದ್ದರು.
"

ಜಿಲ್ಲಾಸ್ಪತ್ರೆಗೆ ಭೇಟಿ; ಪರಿಶೀಲನೆ 

ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರು ಅಲ್ಲಿನ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರದ ಪರಿಶೀಲನೆ ನಡೆಸಿದರು. ಮಗುವಿನ ಆರೈಕೆ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು. ಜನನದ ನಂತರದ ಮೊದಲ 10 ದಿನಗಳಲ್ಲಿ ತಾಯಿ ನೀಡುವ ಎದೆಹಾಲು ಮಗುವಿಗೆ ಅಗತ್ಯವಾದ ಪೋಷಕಾಂಶ ಒದಗಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಾಯಂದಿರಿಗೆ ತಿಳಿಸಿದರು. ಡಿಎಚ್‌ಒ ಡಾ. ಮಲ್ಲನಗೌಡ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಂತೋಷಕುಮಾರ್ ಎಚ್, ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾಕ್ಷಿ ಜಾನಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ, ಎಸ್.ಸಿ.ಮ್ಯಾಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net