ನೀಟ್​ ಪತ್ರಿಕೆ ಸೋರಿಕೆಗೆ ಸಿಪಿಐಎಂ ಆಕ್ರೋಶ / DODABALLAPUR

ದೊಡ್ಡಬಳ್ಳಾಪುರದ ಡಾ.ಅಂಬೇಡ್ಕರ್​ ಪ್ರತಿಮೆ ಮುಂದೆ ಸಿಪಿಐಎಂನಿಂದ ನೀಟ್​ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಸ್​.ರುದ್ರಾರಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎ.ವೆಂಕಟೇಶ್​, ಮೋಹನ್​ ಬಾಬು, ಪ್ರಭಾಬೆಳವಂಗಲ, ತಾಲೂಕು ಸಮಿತಿ ಸದಸ್ಯರಾದ ರೇಣುಕಾ ಆರಾಧ್ಯ, ನಟರಾಜ್​, ರಘುಕುಮಾರ್​, ಚೌಡಯ್ಯ ಇದ್ದರು.
ದೊಡ್ಡಬಳ್ಳಾಪುರದ ಡಾ.ಅಂಬೇಡ್ಕರ್​ ಪ್ರತಿಮೆ ಮುಂದೆ ಸಿಪಿಐಎಂನಿಂದ ನೀಟ್​ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಸ್​.ರುದ್ರಾರಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎ.ವೆಂಕಟೇಶ್​, ಮೋಹನ್​ ಬಾಬು, ಪ್ರಭಾಬೆಳವಂಗಲ, ತಾಲೂಕು ಸಮಿತಿ ಸದಸ್ಯರಾದ ರೇಣುಕಾ ಆರಾಧ್ಯ, ನಟರಾಜ್​, ರಘುಕುಮಾರ್​, ಚೌಡಯ್ಯ ಇದ್ದರು.
Published on
ದೊಡ್ಡಬಳ್ಳಾಪುರ : ನೀಟ್​ ಪತ್ರಿಕೆ ಸೋರಿಕೆಯಾಗಿರುವುದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ. ಇದರಿಂದ 22 ಲಕ್ಷ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವೈದ್ಯಕಿಯ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳುವ ಆಕಾಂಕ್ಷೆ ಇಟ್ಟುಕೊಂಡಿದ್ದ ವಿದ್ಯಾರ್ಥಿಗಳಿಗೆ ಆಘಾತ ಉಂಟಾಗಿದೆ ಎಂದು ಸಿಪಿಐಎಂ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸಿಪಿಐಎಂಯಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಡಾ.ಅಂಬೇಡ್ಕರ್​ ಪ್ರತಿಮೆ ಮುಂದೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ವರ್ಷಾನುಗಟ್ಟಲೆ ಕಷ್ಟಪಟ್ಟ ವಿದ್ಯಾರ್ಥಿಗಳ ಅವಿರಥ ಶ್ರಮ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಭವಿಷ್ಯಕ್ಕಾಗಿ ಶ್ರಮವಹಿಸಿದ ಪಾಲಕರು ಕಂಗಾಲಾಗಿದ್ದಾರೆ. ಆಘಾತದಿಂದ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ರಾಧಾಕೃಷ್ಣನ್​ ಸಮಿತಿ ಪರೀಕ್ಷೆಗಳನ್ನು ನಡೆಸುವಲ್ಲಿ ನೀಡಿದ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ವಿಫಲವಾಗಿದೆ. ನೀಟ್​ ರದ್ದುಗೊಳಿಸಬೇಕು. ಶಿಕ್ಷಣ ನೀಡುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ರಕ್ಷಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್​ ರಾಜೀನಾಮೆ ನೀಡಬೇಕು. ಇಲ್ಲವೇ ಪ್ರಧಾನಿ ಮೋದಿ ಕೇಂದ್ರ ಶಿಕ್ಷಣ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಆರ್​.ಚಂದ್ರತೇಜಸ್ವಿ ಮಾತನಾಡಿ, 2013ರಿಂದ ಈ ಪರೀಕ್ಷೆಗಳನ್ನು ಕೇಂದ್ರ ನಡೆಸುತ್ತಿದ್ದು, ಪರೀಕ್ಷಾ ಪತ್ರಿಕೆಗಳ ಸೋರಿಕೆ ತಡೆಗಟ್ಟುವಲ್ಲಿ ವಿಫಲವಾಗಿದೆ. ಈ ಬಗ್ಗೆ ಪ್ರಧಾನಿ ಮೌನವಹಿಸಿದ್ದಾರೆ. ಇವರೆಲ್ಲರೂ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಚೀನಾದಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸೈನ್ಯದ ರಕ್ಷಣೆಯಲ್ಲಿ ನಡೆಯುತ್ತವೆ. ಒಂದು ವೇಳೆ ಅಕ್ರಮ ಎಸಗಿದರೆ ತಕ್ಷಣವೇ ಏಳು ವರ್ಷ ಜೈಲು ಶಿಕ್ಷೆಯಾಗುತ್ತದೆ. ಕ್ಯೂಬಾದಂತಹ ಚಿಕ್ಕ ದೇಶದಲ್ಲಿ ಉಚಿತ ವೈದ್ಯಕಿಯ ಶಿಕ್ಷಣ ನೀಡಲಾಗುತ್ತಿದೆ. ಆದರೆ ಬಾರತದಲ್ಲಿ ಶಿಕ್ಷಣ ವ್ಯಾಪಾರೀಕರಣ ಆಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಬಡ ಹಾಗೂ ಮಧ್ಯಮ ವರ್ಗದವರು ಉನ್ನತ ಶಿಕ್ಷಣ ಕನಸಾಗಿ ಉಳಿಯುತ್ತದೆ. ಕೂಡಲೇ ಪ್ರಕರಣದ ತನಿಖೆ ನಡೆಸಿ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net