ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ

ಮುಧೋಳ ತಾಲೂಕಿನ ಮುದ್ದಾಪುರ ಜೆಕೆ ಸಿಮೆಂಟ್ ಕಾರ್ಖಾನೆಯ ಆವರಣದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ. ನ್ಯಾಯವಾದಿ ಎನ್.ಎಸ್. ದೇವರವರ, ವಿ.ವಿ. ತುಳಸಿಗೇರಿ, ಸುರೇಶ ಕಿವಡಿ ಇದ್ದರು.
ಮುಧೋಳ ತಾಲೂಕಿನ ಮುದ್ದಾಪುರ ಜೆಕೆ ಸಿಮೆಂಟ್ ಕಾರ್ಖಾನೆಯ ಆವರಣದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ. ನ್ಯಾಯವಾದಿ ಎನ್.ಎಸ್. ದೇವರವರ, ವಿ.ವಿ. ತುಳಸಿಗೇರಿ, ಸುರೇಶ ಕಿವಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಹೋರಾಟಗಾರ ಎನ್.ಎಸ್. ದೇವರವರ ಎಚ್ಚರಿಕೆ
  • ಜೆ.ಕೆ. ಸಿಮೆಂಟ್ ಕಾರ್ಖಾನೆ ವಿರುದ್ಧ ಆಕ್ರೋಶ
ಮುಧೋಳ: ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಕಾನೂನಿನ ಪ್ರಕಾರ ಅವಕಾಶವಿಲ್ಲದಿದ್ದರೂ, ಪ್ರಭಾವ ಬಳಸಿ ರೈತರಿಗೆ ದಲ್ಲಾಳಿಗಳ ಮೂಲಕ ಮೋಸ ಮಾಡಲಾಗಿದೆ. ಜೆ.ಕೆ. ಕಾರ್ಖಾನೆ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಜಮಖಂಡಿಯ ಪರಿಸರ ಹೋರಾಟಗಾರ, ನ್ಯಾಯವಾದಿ ಎನ್.ಎಸ್. ದೇವರವರ ಎಚ್ಚರಿಕೆ ನೀಡಿದರು.
ತಾಲೂಕಿನ ಮುದ್ದಾಪುರ ಗ್ರಾಮದ ಜೆ.ಕೆ. ಸಿಮೆಂಟ್ ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರಂಭದಿಂದಲೂ ಈ ಕಾರ್ಖಾನೆಗೆ ಪರವಾನಗಿ ನೀಡಬಾರದೆಂದು ಹೋರಾಟ ನಡೆಸುತ್ತಿದ್ದು, ಈಗ ಕಾನೂನು ಸಮರಕ್ಕೆ ಸಜ್ಜಾಗಿದ್ದೇವೆ ಎಂದರು. ಎಂಎಂಡಿಆರ್ ಕಾಯ್ದೆ 1957ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆಗಾಗಿ ಗಣಿ ಗುತ್ತಿಗೆ ರದ್ದುಪಡಿಸುವ ಅಥವಾ ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.
ರಾಷ್ಟ್ರೀಯ ಖನಿಜ ನೀತಿಯೂ ಪರಿಸರ ರಕ್ಷಣೆಗೆ ಒತ್ತು ನೀಡಿದೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗುವುದು. ವಿವಾದಿತ ಪ್ರದೇಶ ತಕ್ಷಣವೇ ‘ನೋ-ಮೈನಿಂಗ್ ರೆನ್’ ಎಂದು ಘೋಷಿಸಬೇಕು. ಕಾನೂನುಬಾಹಿರ ಗಣಿಗಾರಿಕೆ ತಡೆಯಲು ಉಪಗ್ರಹ ಆಧಾರಿತ ‘ಮೈನಿಂಗ್ ಸರ್ವೆಲೆನ್ಸ್ ಸಿಸ್ಟಂ’ ಮೂಲಕ ನಿರಂತರ ಕಣ್ಗಾವಲು ಇರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಂಕರಗೌಡ ಹಿರೇಗೌಡ ಮಾತನಾಡಿ, ಪರಿಸರ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಕಾರ್ಖಾನೆ ಉತ್ಪಾದನೆ ಕಡಿತಗೊಳಿಸಿ ಸುಳ್ಳು ವರದಿ ಸೃಷ್ಟಿಸಲಾಗುತ್ತಿದೆ. ಅಧಿಕಾರಿಗಳು ಕಾರ್ಖಾನೆಯವರ ಆತಿಥ್ಯ ಸ್ವೀಕರಿಸುತ್ತಿದ್ದಾರೆ. ಇದು ಒಳ ಒಪ್ಪಂದವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಬೊಮ್ಮನಬುದ್ನಿ, ಹಲಕಿ, ನಿಂಗಾಪುರ, ಕಮಕೇರಿ, ಪೆಟ್ಲೂರ, ಮುದ್ದಾಪುರ, ತಿಮ್ಮಾಪುರ, ಹೆಬ್ಬಾಳ ಮತ್ತು ಕನಸಗೇರಿ ಗ್ರಾಮಗಳ ನೂರಾರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಗಣಿಗಾರಿಕೆ ನಿಲ್ಲುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ವಕೀಲ ವಿ.ವಿ. ತುಳಸಿಗೇರಿ, ಸುರೇಶ ಕಿವಡಿ ಮಹೇಶ ಅಂಗಡಿ, ಹಣಮಂತ ಕಿವಡಿ, ವಿಷ್ಣು ತುಳಸಿಗೇರಿ, ಹೆಬ್ಬಾಳದ ನಾಗಪ್ಪ ಹೊಸಟ್ಟಿ, ಸುರೇಶ ಹಿರೇಮರ, ಚನ್ನಪ್ಪ ದಾಸರ, ಗಂಗಾರಾಮ ಪೂಜೇರಿ, ಭೀಮಪ್ಪ ಸಿರಿಗುಂಪಿ, ಕೃಷ್ಣಾ ಯಾದವಾಡ, ಗೋಪಾಲ ತುಳಸಿಗೇರಿ, ಸಾಹೇಬಗೌಡ ರಡ್ಡಿ, ಮಲ್ಲನಗೌಡ ರಡ್ಡಿ, ರಂಗಪ್ಪ ತುಳಸಿಗೇರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net