ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಪಿಕೆಪಿಎಸ್ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಮಾತನಾಡಿದರು. ಉಪಾಧ್ಯಕ್ಷ ಬಸವರಾಜ ಗೋಗೇರಿ, ನಿರ್ದೇಶಕರಾದ ಬಸಪ್ಪ ದಳವಾಯಿ ಇತರರಿದ್ದರು.
ಬಾದಾಮಿ: ಸಹಕಾರಿಗಳ ಸಹಕಾರದಿಂದ ಸಹಕಾರಿ ಸಂಘ ಪ್ರತಿ ವರ್ಷ ಪ್ರಗತಿ ಪಥದತ್ತ ಸಾಗುತ್ತಿದೆ. ರೈತಾಪಿ ಬಾಂಧವರ ಆರ್ಥಿಕ ಪ್ರಗತಿಯೇ ಸಂಘದ ಮೂಲ ಉದ್ದೇಶವಾಗಿದೆ. ಸಾಲ ಪಡೆದ ಸಹಕಾರಿಗಳು ಸಕಾಲಕ್ಕೆ ಮರು ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಹೇಳಿದರು.
ತಾಲೂಕಿನ ಜಾಲಿಹಾಳ ಗ್ರಾಮದ ಪಿಕೆಪಿಎಸ್ ಸಂಘದ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘ ಉತ್ತಮ ಹಣಕಾಸಿನ ವಹಿವಾಟು ನಡೆಸುವ ಮೂಲಕ 32.34 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯ ನಿರ್ವಾಹಕ ಮಾನಪ್ಪ ಬಡಿಗೇರ ಆರ್ಥಿಕ ತಖ್ತೆ ಮಂಡನೆ, ಶಿವಾಜಿ ಘಾಟನೆ ಹಿಂದಿನ ಸಭೆ ಠರಾವುಗಳ ಮಂಡನೆ, ಗಂಗಾಧರ ಮೂಲಿಮನಿ ಲಾಭ ವಿಂಗಡನೆ ಮಂಡನೆ, ನಿರ್ದೇಶಕ ಟಿಪ್ಪಸಾಬ ಕೆರೂರ ಲೆಕ್ಕ ಪರಿಶೋಧಕ ಮಂಡನೆ ಮಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ತಲಾ ಮೂರು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರನ್ನು ಪುರಸ್ಕರಿಸಲಾಯಿತು.