ಪಾಳ್ಯಕೆರೆ ಗ್ರಾಮದಲ್ಲಿ ಪಶು ಆಸ್ಪತ್ರೆಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು. ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ, ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ರಂಗಪ್ಪ, ಸಹಾಯಕ ನಿರ್ದೇಶಕ ಶೈಲೇಂದ್ರ ಕುಲಕರ್ಣಿ, ಕೃಷ್ಣಮೂರ್ತಿ ಇದ್ದರು.
ಗ್ರಾಮೀಣ ಭಾಗಗಳಲ್ಲಿ ಪಶು ಆಸ್ಪತ್ರೆ ಆರಂಭಿಸಿದರೆ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನುಡಿದರು.
ಪಾಳ್ಯಕೆರೆ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಪಾಳ್ಯಕೆರೆ ಗ್ರಾಪಂ, ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಉಪಯೋಗವಾಗಲಿದೆ. ಗ್ರಾಮೀಣ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ರೈತರಿಗೆ ಜಾನುವಾರುಗಳು ಆಧಾರಸ್ತಂಭವಾಗಿದ್ದು, ಅವುಗಳ ಆರೋಗ್ಯ ಕಾಪಾಡಲು ಗ್ರಾಮದಲ್ಲಿಯೇ ಪಶು ಚಿಕಿತ್ಸಾಲಯ ನಿರ್ಮಿಸಿರುವುದು ಅನುಕೂಲವಾಗಲಿದೆ.
ಕೃಷಿಯೊಂದಿಗೆ ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ರೈತರು ಆದಾಯ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು.
ರೈತರು ದೇಶಕ್ಕೆ ಅನ್ನ ನೀಡುವವರಾಗಿದ್ದು, ಕೃಷಿ ಚಟುವಟಿಕೆಗಳಿಗೆ ನಿಸರ್ಗದ ಸಹಕಾರವೂ ಅಗತ್ಯವಾಗಿದೆ. ರೈತರು ಹಾಗೂ ಅವರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಕಾಲದಲ್ಲಿ ಮಳೆ ಹಾಗೂ ಉತ್ತಮ ಬೆಳೆ ದೊರೆಯಲಿ ಎಂದರು.
ರೈತರು, ಗ್ರಾಮಸ್ಥರು ಮಾತನಾಡಿ, ಪಾಳ್ಯಕೆರೆ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಜನತೆ ಕಂಡಿದ್ದ ಕನಸು ನನಸ್ಸಾಯಿತು. ಪಶು ಚಿಕಿತ್ಸಾಲಯ ಮಂಜೂರಾತಿಯಾಗಿ ಇದೀಗ ಪ್ರಾರಂಭವಾಗಿದೆ. ನೂರಾರು ಜಾನುವಾರುಗಳಿಗೆ ನೆರವಾಗಲಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.
ಪಿಡಿಒ ಕೆ.ವೆಂಕಟಾಚಲಪತಿ, ಡೇರಿ ಅಧ್ಯಕ್ಷ ವೆಂಕಟರಮಣಸ್ವಾಮಿ, ಕಾರ್ಯದರ್ಶಿ ಮುನಿಸ್ವಾಮಿಗೌಡ, ಗ್ರಾಮದ ಮುಖಂಡರಾದ ಅಮರನಾಥರೆಡ್ಡಿ, ವಕೀಲ ಚಂದ್ರಶೇಖರೆಡ್ಡಿ, ರಮೇಶ್ ರೆಡ್ಡಿ, ರವಿಚಂದ್ರರೆಡ್ಡಿ, ರಾಜಾರೆಡ್ಡಿ, ವೆಂಕಟರೆಡ್ಡಿ, ಟಿ.ಇ.ಬಾಷಾ, ಆರ್.ಇ.ಶ್ರೀನಿವಾಸ್, ಅನ್ವರ್ ಇದ್ದರು.