ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಣ್ಣಪ್ಪ ತಳವಾರ ಉದ್ಘಾಟಿಸಿ ಮಾತನಾಡಿದರು. ಸಿದ್ಧೇಶ್ವರ ಕಮತಿ, ವಿವೇಕಾನಂದ ಉಘಡೆ, ಶ್ರೀಮಂತ ಕಾಪಸೆ ಇತರರಿದ್ದರು.
ಹೊರ್ತಿ: ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಹಾಗೂ ಸತತ ಪರಿಶ್ರಮ ಮತ್ತು ಗುರಿಯೊಂದಿಗೆ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿ ರಾಜ್ಯದಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಎಸ್‌ಟಿ ಘಟಕದ ಉಪಾಧ್ಯಕ್ಷ ಗ್ರಾ.ಪಂ ಮಾಜಿ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.
ಝಳಕಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ವಿವಿಧ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವಿರಬೇಕು ಅಂದಾಗ ಮಾತ್ರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಐಎಎಸ್ ಹಾಗೂ ಕೆಎಎಸ್ ಮತ್ತು ಇತರೇ ಉನ್ನತ ಹುದ್ದೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿಜಯಪುರ ಎಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ಧೇಶ್ವರ ಕಮತಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಶ್ರಮ ಹಾಗೂ ಸಾಧಿಸುವ ಛಲದೊಂದಿಗೆ ಕಷ್ಟಗಳೆದುರು ನಗುವ ಮನೋಭಾವವಿದ್ದಾಗ ಮಾತ್ರ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯ ಡಾ. ವಿವೇಕಾನಂದ ಉಘಡೆ, ಶ್ರೀಮಂತ ಕಾಪಸೆ ಮಾತನಾಡಿದರು.