

ಪ್ರಮುಖ ಮುಖ್ಯಾಂಶಗಳು
ವಿಜಯಪುರ : ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ನಿರಂತರ ಪ್ರಯತ್ನ ಮಾಡುವುದು ಅತ್ಯಗತ್ಯ ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎ. ಉಪ್ಪಾರ ಹೇಳಿದರು.
ನಗರದ ಆರ್‌ಕೆಎಂ ಪಿಯು ವಿಜ್ಞಾನ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಹಿಕಾ-2026 ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಾಲಕರ ಕನಸುಗಳನ್ನು ನನಸು ಮಾಡುವ ಸಂಕಲ್ಪದ ಜತೆಗೆ ಶ್ರದ್ಧೆ, ಪರಿಶ್ರಮ ಹಾಗೂ ಶಿಸ್ತುಬದ್ಧ ಅಧ್ಯಯನ ಕೈಗೊಳ್ಳುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರಲ್ಲದೆ, ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವಲ್ಲಿ ಆರ್‌ಕೆಎಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್‌ಕೆಎಂ ಶಿಕ್ಷಣ ಸಂಸ್ಥೆಗಳ ಸಮೂಹದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕರ್ಪೂರಮಠ ಮಾತನಾಡಿ, ನಮ್ಮ ಆಲೋಚನೆ, ನಮ್ಮ ನಡೆ-ನುಡಿ, ನಮ್ಮ ಕೆಲಸ ಮತ್ತು ಶಿಸ್ತು ಎಂಬ ಶೇ. 20 ರಷ್ಟು ಅಂಶಗಳ ಮೇಲೆ ಗಮನಹರಿಸಿದಲ್ಲಿ, ಉಳಿದ ಶೇ. 80 ರಷ್ಟು ಫಲಿತಾಂಶಗಳು ಸಹಜವಾಗಿ ದೊರೆಯುತ್ತವೆ. ಯುವಜನತೆ ಏಕಾಗ್ರತೆ, ಉದ್ದೇಶಪೂರ್ವಕ ಜೀವನ ಮತ್ತು ನಿಯಮಿತ ಜೀವನಶೈಲಿ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಪ್ರಾಚಾರ್ಯೆ ಮೇಧಾ ಕರ್ಪೂರಮಠ ಮಾತನಾಡಿದರು.
ಡಿಡಿಪಿಯು ಕಚೇರಿಯ ವಿಭಾಗಾಧಿಕಾರಿ ಬಿ.ಟಿ. ಗೊಂಗಡಿ, ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ಎನ್.ಎಂ. ರುದ್ರಗೌಡರ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಅಮಿತ್ ಎಚ್. ಮತ್ತಿತರರಿದ್ದರು. ಸಂಜನಾ ಗುಂಡಣ್ಣವರ ನಿರೂಪಿಸಿದರು. ಸುಚಿತ್ರಾ ಮಾಲಗಾರ ವಂದಿಸಿದರು.