ನೇಕಾರರೊಂದಿಗೆ ಸಮಾಲೋಚನೆ ಸರ್ಕಾರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಿ
ರಬಕವಿ ಚೇತನ್ ಮನಮಿಯವರ ನಿವಾಸದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ಹಾಗೂ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಜಿ. ಟಿರಕಿ ಅವರನ್ನು ಸನ್ಮಾನಿಸಲಾಯಿತು. ನೇಕಾರರಾದ ಶ್ರೀಶೈಲ ಅಂಗಡಿ, ರಾಜೇಂದ್ರ ಮಿಜರ್, ಮಲ್ಲಪ್ಪ ಅಂಗಡಿ, ಸಂಗಪ್ಪ ಉದಗಟ್ಟಿ, ಗಂಗಪ್ಪ ಒಂಟಗೋಡಿ ಇತರರಿದ್ದರು.
ರಬಕವಿ-ಬನಹಟ್ಟಿ: ವೃತ್ತಿಪರ ನೇಕಾರರು ಇಂದು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಕೂಡಲೇ ಪರಿಹರಿಸಬೇಕು. ರೈತರು ಮತ್ತು ನೇಕಾರರು ಒಂದೇ ನಾಣ್ಯದ ಎರಡು ಮುಖಗಳು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ಒತ್ತಾಯಿಸಿದರು.
ರಬಕವಿಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ನೇಕಾರರ ಮನೆಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ವಿದ್ಯುತ್ ದರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ಸೇರಿ ಅನೇಕ ಸಮಸ್ಯೆಗಳಿಂದ ನೇಕಾರ ಸಮುದಾಯ ಸಂಕಷ್ಟದಲ್ಲಿದೆ. ಮುಖ್ಯಮಂತ್ರಿಯವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ರೈತರು ಮತ್ತು ನೇಕಾರರು ಪರಸ್ಪರ ಅವಲಂಬಿತವಾಗಿರುವ ಸಮುದಾಯಗಳಾಗಿದ್ದು, ಅವರ ಹಿತಾಸಕ್ತಿಗಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು.
ಪ್ರತಿಯೊಬ್ಬ ನೇಕಾರರೂ ಸಂಘಟನೆಯೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ರಬಕವಿ ಚೇತನ್ ಮನಮಿಯವರ ನಿವಾಸದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ಹಾಗೂ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಜಿ.ಟಿರಕಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.