ಶನೇಶ್ಚರ ದೇವಸ್ಥಾನ ನಿರ್ಮಾಣ ಪುಣ್ಯದ ಕಾರ್ಯ

ಮುದ್ದೇಬಿಹಾಳ ಪಟ್ಟಣದ ಹಡಲಗೇರಿ ರಸ್ತೆಯ ನೂತನ ಶನೇಶ್ಚರ ದೇವಸ್ಥಾನದಲ್ಲಿ ಶನೇಶ್ಚರ ಜಯಂತಿ ನಿಮಿತ್ತ ಕಲಶ ಮೆರವಣಿಗೆ ನಡೆಯಿತು.
ಮುದ್ದೇಬಿಹಾಳ ಪಟ್ಟಣದ ಹಡಲಗೇರಿ ರಸ್ತೆಯ ನೂತನ ಶನೇಶ್ಚರ ದೇವಸ್ಥಾನದಲ್ಲಿ ಶನೇಶ್ಚರ ಜಯಂತಿ ನಿಮಿತ್ತ ಕಲಶ ಮೆರವಣಿಗೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಪ್ರಾಯ
  • ದಾನಿಗಳ ಸಹಕಾರ
ಮುದ್ದೇಬಿಹಾಳ: ಶನೇಶ್ಚರ ದರ್ಶನಕ್ಕಾಗಿ ಇಲ್ಲಿನ ಜನತೆ ಸಾವಿರಾರು ರೂಪಾಯಿ ಖರ್ಚು ಮಾಡಿ, ದಿನಗಟ್ಟಲೆ ಪ್ರಯಾಣ ಬೆಳೆಸಿ ಮಹಾರಾಷ್ಟ್ರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಈಗ ಪಟ್ಟಣದಲ್ಲಿಯೇ ಶನೇಶ್ಚರರ ಭವ್ಯ ಮಂದಿರ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯ ನೂತನ ಶನೇಶ್ಚರ ದೇವಸ್ಥಾನದಲ್ಲಿ ಶನೇಶ್ಚರ ಜಯಂತಿ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಭಾಗದ ಜನತೆಗೆ ದೈವಭಕ್ತಿ ಜಾಸ್ತಿ. ಅದರಲ್ಲೂ ಶನಿ ಮಹಾತ್ಮನ ದೋಷ ನಿವಾರಣೆಗೆ, ಕಾಟ ಪರಿಹಾರಕ್ಕೆ ಮಹಾರಾಷ್ಟ್ರದ ಶನಿ ಶಿಂಗಣಾಪೂರದವರೆಗೆ ಹೋಗಿ ಬರಲು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಇಲ್ಲಿಯೇ ಇಷ್ಟೊಂದು ಸುಂದರ ಮತ್ತು ದೈವಿಕ ಕಳೆಯಿಂದ ಕೂಡಿರುವ ಶನೇಶ್ಚರ ದೇವಸ್ಥಾನ ನಿರ್ಮಾಣವಾಗಿರುವುದು ಮನೆ-ಮನಗಳಲ್ಲಿ ಸಂತಸ ತಂದಿದೆ ಎಂದರು.
ವ್ಯಾಪಾರಿ ವಿಕ್ರಂ ಓಸ್ವಾಲ್ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸುವುದು ಸುಲಭದ ಮಾತಲ್ಲ. ಆದರೆ ಒಬ್ಬ ನಿವತ್ತ ಕೆಎಸ್‌ಆರ್‌ಟಿಸಿ ನೌಕರರಾದ ನಾಗಪ್ಪ ಮಕ್ತೇದಾರ ಅವರು ತಾವೊಬ್ಬರೇ ನಿಂತು ದಾನಿಗಳ ಸಹಾಯದಿಂದ ಇಂಥದ್ದೊಂದು ಭವ್ಯ ದೇವಸ್ಥಾನ ನಿರ್ಮಿಸಿದ್ದು ಶ್ಲಾಘನೀಯ ಎಂದರು.
ಎಂಜಿವಿಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರಕಾಶ ನರಗುಂದ ಮಾತನಾಡಿ, ಹಿಂದೂ ಧರ್ಮದಲ್ಲಿ ಶನೇಶ್ಚರ ದೇವರು ಎಂದರೆ ಸ್ವಲ್ಪ ಭಯ ಜಾಸ್ತಿ. ಸಾಮಾನ್ಯವಾಗಿ ಶನೇಶ್ಚರರನ್ನು ಮನೆಯಲ್ಲಿರಿಸಿಕೊಂಡು ಪೂಜಿಸೋದು ವಿರಳ. ಹಾಗಾಗಿ ಈ ಭಾಗದ ಜನತೆಯ ದರ್ಶನಕ್ಕೆ ಈ ದೇವಾಲಯ ನಿರ್ಮಾಣವಾಗಿರುವುದು ತಂಡಿದೆ ಎಂದರು.
ಅರ್ಚಕ ನಾಗಪ್ಪ ಮಕ್ತೇದಾರ, ಶಿಕ್ಷಕಿ ಗೀತಾಂಜಲಿ ಕೋರಿ, ಚಂದ್ರಶೇಖರ ಪ್ಯಾಟಿಗೌಡರ, ರೂಪಾ ಪತ್ತಾರ, ಪ್ರಾಚಾರ್ಯ ಪ್ರಕಾಶ ರಾಠೋಡ, ಸುನೀತಾ ಕತ್ತಿ, ರಾಜು ವಡ್ಡರ ಮಾತನಾಡಿದರು. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ ಕೌಶಿಕ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ಪುರಸಭೆ ಸದಸ್ಯ ಹಣಮಂತ ಬೋವಿ, ಸಂಗಣ್ಣ ಜಿಟಿಸಿ, ಬಸಯ್ಯ ನಂದಿಕೇಶ್ವರಮಠ ಇತರರಿದ್ದರು.
ಪ್ರತಿ ಹದಿಮೂರು ವರ್ಷಗಳಿಗೊಮ್ಮೆ ಮಾತ್ರ ಬರುವ ಅತ್ಯಂತ ಅಪರೂಪದ ಶನಿವಾರ, ಅಮಾವಾಸ್ಯೆ ಮತ್ತು ಶನಿದೇವರ ಜಯಂತಿ ನಿಮಿತ್ತ ಕಲಶ ಮೆರವಣಿಗೆ, ವಿಶೇಷ ಎಳ್ಳೆಣ್ಣೆ ಅಭಿಷೇಕ, ಹೋಮ, ಹವನ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳನ್ನು ಭಕ್ತರ ಕಣ್ಣು ತುಂಬಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net