ನಿರಂತರ ಹೋರಾಟದಿಂದ ರಾಮಮಂದಿರ ನಿರ್ಮಾಣ

ಎಚ್.ಡಿ.ಕೋಟೆ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು
ಎಚ್.ಡಿ.ಕೋಟೆ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು
Published on
ಎಚ್.ಡಿ.ಕೋಟೆ: ಅಯೋಧ್ಯೆ ಶ್ರೀರಾಮ ಮಂದಿರದ ಮೇಲೆ ಧರ್ಮಧ್ವಜ ಹಾರಿಸುವ ಮೂಲಕ ರಾಷ್ಟ್ರದಲ್ಲಿ ಸನಾತನ ಧರ್ಮದ ವಿಜಯಪರ್ವ ಪ್ರಾರಂಭವಾಗಿದೆ ಎಂಬುದು ಸಾಧು ಸಂತರ ಅಭಿಪ್ರಾಯವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಪ್ರಮುಖ್ ಉಲ್ಲಾಸ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರಂತರ ಹೋರಾಟ ಮೂಲಕ ಹಿಂದೂಗಳ ಹೋರಾಟದ ಸಂಕಲ್ಪ ಶಕ್ತಿಯ ಸಂಕೇತವಾಗಿ ಮಂದಿರ ತಲೆ ಎತ್ತಿ ನಿಂತಿದೆ. ಸೋಮನಾಥ ದೇವಾಲಯದ ಮೇಲೆ ದಾಳಿಯಾಗಿ ಸಾವಿರ ವರ್ಷಗಳು ಸಂದಿದ್ದು, ಅದು ಎಷ್ಟು ಬಾರಿ ದಾಳಿ ನಡೆದರು ಹಿಂದೂಗಳು ಮತ್ತೆ ಮತ್ತೆ ಪುನರುತ್ಥಾನಗೊಳಿಸಿದರು. ಸ್ವಾಮಿ ವಿವೇಕಾನಂದರು ವಿದೇಶದಿಂದ ಆಗಮಿಸಿದ ನಂತರ ಇಡೀ ದೇಶವನ್ನು ಸುತ್ತಾಟ ನಡೆಸಿದರು. ಹಿಂದೂಗಳು ತಮ್ಮ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಪರಸ್ಪರ ಅಸೂಯೆ, ಕಚ್ಚಾಟದಲ್ಲಿ ತೊಡಗಿರುವುದನ್ನು ಕಂಡರು. ಆಗ ಧರ್ಮ ಉಳಿದರೆ ಮಾತ್ರ ದೇಶವೆಂದು ಧರ್ಮ ಸಂಸ್ಕೃತಿಯ ಪುನರುತ್ಥಾನ ಮತ್ತು ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದನ್ನು ನಾವು ಮರೆಯಬಾರದು ಎಂದರು.
ಇಂದು ಭಾರತ ಬಲಿಷ್ಠವಾಗಿದೆ. ನೆರೆಯ ದೇಶಗಳ ಮಧ್ಯೆ ಸಮಸ್ಯೆಗಳು ತಲೆದೋರಿದರೆ ಭಾರತ ಇಲ್ಲದೆ ಇತ್ಯರ್ಥವಾಗುದಿಲ್ಲ ಎಂಬುದರ ಮಟ್ಟಿಗೆ ದೇಶ ಬೆಳೆದಿದೆ. ನೂರು ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಜಗತ್ತಿನಲ್ಲಿಯೇ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದ ಸಂಘವಾಗಿರುವುದು ಹೆಮ್ಮೆಯ ವಿಷಯ ಎಂದರು.
ವಿರಕ್ತ ಮಠದ ಮಹದೇವಸ್ವಾಮಿ ಮಾತನಾಡಿ, ರಾಷ್ಟ್ರದ ಮೇಲೆ ಆಕ್ರಮಣ, ದಬ್ಬಾಳಿಕೆಯು ದೇಶದ ಹೊರಗಿನಿಂದ ಮತ್ತು ಒಳಗಡೆ ನಡೆಯುತ್ತಿದೆ. ಹಾಗಾಗಿ ನಾವು ಜಾತಿ, ಮತ, ಪಂಥ ಮೀರಿ ಒಗ್ಗೂಡಬೇಕಾದ ಅನಿವಾರ್ಯತೆ ಇದೆ. ಆಧುನಿಕ ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ಉಡುಗೆ ತೊಡುಗೆಗಳು, ಆಚಾರ ವಿಚಾರಗಳನ್ನು ಅನುಸರಿಸುವುದನ್ನು ತಡೆಯಬೇಕು. ನಮ್ಮ ದೇಶದ ಸಂಸ್ಕೃತಿ ಶ್ರೇಷ್ಠವಾಗಿದ್ದು ಮಕ್ಕಳಿಗೆ ತಿಳಿಹೇಳಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು. ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಗೋ ಪೂಜೆ ನೆರವೇರಿಸಿದ ನಂತರ ಮಂಗಳವಾದ್ಯದೊಂದಿಗೆ ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸಾಗಿದರೆ, ವೀರಗಾಸೆ, ನಗಾರಿಯೊಂದಿಗೆ ಭಾರತ ಮಾತೆಯ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು.
ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಂಯೋಜಕ ಜೆ.ಬಿ.ಶಿವಸ್ವಾಮಿ, ಸಹ ಸಂಯೋಜಕ ಪೂರ್ಣೇಶ್, ಮುಖಂಡರಾದ ಸಿ.ಎನ್.ನಾಗಣ್ಣ, ರುದ್ರಪ್ಪ, ಶಂಭೇಗೌಡ, ವೀರಪ್ಪ, ಟಿ.ವೆಂಕಟೇಶ್, ನಟರಾಜು, ಮಹದೇವಪ್ಪ, ಸಂತೋಷ್, ಕನ್ನಡ ಪ್ರಮೋದ, ಜಯಂತ್, ಶ್ರೀಕಾಂತ್, ದೇವರಾಜು, ನಂದೀಶ್, ಚಂದ್ರಮೌಳಿ, ಮಹೇಶ್, ರೂಪೇಶ್, ಬಿಡಗಲು ರಾಜು, ಮುತ್ತುರಾಜು, ಸಿದ್ದನಾಯಕ, ಎಡತೊರೆ ಮಹೇಶ್, ಸೋಮೇಶ್, ಪಳನಿಸ್ವಾಮಿ, ವಿಶ್ವಾರಾಧ್ಯ, ನಾಗೇಶ್, ಗುರುಸ್ವಾಮಿ, ಮಾದರಾಜು, ಪೃಥ್ವಿ ಚಂದ್ರಶೇಖರ್, ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net